ಕಿಲೆಂಜಾರು ಗ್ರಾಮದ ನೀರಳಿಕೆ ಎಂಬಲ್ಲಿ ಟವರ್ ನಿರ್ಮಿಸಲು ಗುಂಡಿ ತೋಡಿರುವುದು 
ನ್ಯೂಸ್

ಬಂಡೆ ಸ್ಫೋಟದಿಂದ ಮನೆಗಳಿಗೆ ಹಾನಿ, ಪಡುಬಿದ್ರಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆ

ವಿಜಯವಾಣಿ ಸುದ್ದಿಜಾಲ ಗುರುಪುರ

ಪಡುಬಿದ್ರಿ- ಕಾಸರಗೋಡು ಮಧ್ಯೆ ಕೈಗೆತ್ತಿಕೊಂಡಿರುವ 400 ಕೆ.ವಿ. ವಿದ್ಯುತ್ ಯೋಜನೆಗಾಗಿ ಕುಪ್ಪೆಪದವು ಪಂಚಾಯಿತಿ ವ್ಯಾಪ್ತಿಯ ಕಿಲೆಂಜಾರು ಗ್ರಾಮದ ನೀರಳಿಕೆ ಎಂಬಲ್ಲಿ ಬೃಹತ್ ಟವರ್ ಸ್ಥಾಪಿಸಲು ಬಂಡೆ ಸ್ಫೋಟಿಸಿ, ಗುಂಡಿ ತೋಡುವ ವೇಳೆ ಸುತ್ತಲ ಪ್ರದೇಶದ ಕೆಲವು ಮನೆಗಳ ಮಹಡಿ ಮೇಲೆ ಕಲ್ಲು ಬಿದ್ದು ಹಾನಿಯಾಗಿದ್ದರೆ, ನಾಗಬನ ಮತ್ತು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿ ವಾಮನ ಪೂಜಾರಿ ಗ್ರಾಪಂಗೆ ದೂರು ನೀಡಿದ್ದಾರೆ.

ವಿದ್ಯುತ್ ಮಾರ್ಗಕ್ಕಾಗಿ ನೀರಳಿಕೆಯಲ್ಲಿ ಕಂಪನಿ ಬೃಹತ್ ಟವರ್ ನಿರ್ಮಿಸುತ್ತಿದೆ. ಟವರ್ ಸ್ಥಾಪಿಸಲು ಗುಂಡಿ ತೋಡುವಲ್ಲಿ ಬಂಡೆ ಸ್ಫೋಟಿಸಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಕಜೆಯಲ್ಲಿ ಜಬ್ಬಾರ್ ಎಂಬುವರ ಮನೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಅಕ್ಕಪಕ್ಕದ ಮನೆಗಳತ್ತ ಕಲ್ಲುಗಳು ಹಾರಿ ಬಿದ್ದಿವೆ. ಕಾಮಗಾರಿ ಪ್ರದೇಶದಲ್ಲಿರುವ ಕಾಲುದಾರಿಯಲ್ಲಿ ನಡೆದಾಡುವವರಿಗೆ ಅಪಾಯ ಎದುರಾಗಿದ್ದು, ಯಾವ ಸಂದರ್ಭದಲ್ಲಿ ಸ್ಫೋಟ ನಡೆಯುತ್ತದೆ ಎಂಬ ಮಾಹಿತಿ ಜನರಿಗೆ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಭಾರಿ ಬಂಡೆ ಸ್ಫೋಟದಿಂದ ನಾಗಬನ ಮತ್ತು ಪಂಪ್ ಶೆಡ್‌ಗೆ ಹಾನಿಯಾಗಿದೆ. ಮಳೆ ನೀರು ಹರಿಯುವ ಪರಂಬೋಕು ತೋಡಿಗೆ ಮಣ್ಣು ಬಿದ್ದು, ನೀರು ಹರಿಯದಂತಾಗಿದೆ. ಇದರಿಂದ ಮಳೆಗಾಲದಲ್ಲಿ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ವಾಮನ ಪೂಜಾರಿ ದೂರಿದ್ದಾರೆ.
ಕೆಲವು ಭೂಮಾಲೀಕರು ಈಗಾಗಲೇ ಪರಿಹಾರ ಪಡೆದು ಈ ಯೋಜನೆ ವಿದ್ಯುತ್ ಮಾರ್ಗ ಹಾದು ಹೋಗಲು ಒಪ್ಪಿಗೆ ಸೂಚಿಸಿದ್ದಾರೆ. ಉಳಿದ ಕೆಲವರು ಆಕ್ಷೇಪ ಎತ್ತಿದ್ದಾರೆ. ಒಪ್ಪಿಗೆ ಸಿಕ್ಕಿರುವ ಪ್ರದೇಶದಲ್ಲಿ ಕಂಪನಿ ಕಾಮಗಾರಿ ಮುಂದುವರಿಸಿದೆ.