ಆನಂದಪುರ: ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ವಿಪರೀತ ಗಾಳಿ ಸಹಿತ ಮಳೆಯಾಗಿದೆ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿವೆ. ಆನಂದಪುರ- ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಆಚಾಪುರದಲ್ಲಿ ಮಾವಿನ ಮರದ ದೊಡ್ಡ ರೆಂಬೆ ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದಿದೆ. ಇದರಿಂದ ಸೋಮವಾರ ನಡುರಾತ್ರಿಯಿಂದ ಬೆಳಗ್ಗೆಯವರೆಗೆ ವಿದ್ಯುತ್ ವ್ಯತ್ಯಯವಾಗಿತ್ತು. ಹೊಸೂರು ಗ್ರಾಪಂ ವ್ಯಾಪ್ತಿಯ ಜಂಬೂರಮನೆ, ಚೆನ್ನಶೆಟ್ಟಿಕೊಪ್ಪ, ಬ್ಯಾಡರಕೊಪ್ಪ, ಶಾಂತಿನಗರಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ತಂತಿಗಳು ಸಹ ತುಂಡಾಗಿವೆ. 2.50 ಲಕ್ಷ ರೂ.ಗಿಂತ ಅಧಿಕ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿ ಮತ್ತು ಗುತ್ತಿಗೆದಾರರು ಸೋಮವಾರ ಮಳೆ ನಡುವೆಯೇ ದಿನವಿಡೀ ವಿದ್ಯುತ್ ಕಂಬ ಅಳವಡಿಸುವ ಮತ್ತು ತಂತಿ ಸರಿಪಡಿಸುವ ಕಾರ್ಯ ನಿರ್ವಹಿಸಿದರು.