ಕೋಲಾರ ತಾಲೂಕು ವಿಶ್ವನಾಥಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಮಾತನಾಡಿದರು.  
ನ್ಯೂಸ್

ಅಧಿಕಾರದಲ್ಲಿರುವವರಿಂದಲೇ ದಲಿತರ ಕಡೆಗಣನೆ

ಕೋಲಾರ: ಚುನಾವಣೆ ಸಂದರ್ಭದಲ್ಲಿ ಸಂವಿಧಾನ ಜಪ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವವರು ಇದೀಗ ದಲಿತ ಸಮುದಾಯವನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಹೇಳಿದರು.

ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿ ಅನಾವರಣ ಮಾಡಿ ಮಾತನಾಡಿ, ಅಂಬೇಡ್ಕರ್​ ಅವರು ವಿಶ್ವದ ಒಬ್ಬ ಮಹಾನ್​ ನಾಯಕ. ಅವರು ಬರೆದ ಸಂವಿಧಾನವನ್ನು ವಿಶ್ವದಲ್ಲಿರುವ ಎಲ್ಲ ದೇಶಗಳು ಮೆಚ್ಚಿಕೊಂಡಿವೆ ಎಂದರು.

ಆದರೆ, ದೇಶದಲ್ಲಿರುವ ಕೆಲ ರಾಜಕೀಯ ಪಕ್ಷಗಳು ಅವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅಧಿಕಾರ ಅನುಭವಿಸುತ್ತಿದ್ದಾರೆಯೇ ಹೊರತು ದಲಿತರಿಗಾಗಿ ಏನೂ ಮಾಡಲಿಲ್ಲ. ರಾಜ್ಯದಲ್ಲಿ ಮತ್ತು ದೇಶದಲ್ಲಿ ದಲಿತರೆಲ್ಲ ಒಗ್ಗಟ್ಟಾದರೆ ಮುಂದಿನ ದಿನಗಳಲ್ಲಿ ಸಿಎಂ ಮತ್ತು ಈ ದೇಶದ ಪ್ರಧಾನ ಮಂತ್ರಿಯೂ ಆಗಬಹುದು ಎಂದು ತಿಳಿಸಿದರು.

ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಅಂಬೇಡ್ಕರ್​ ಅವರು ದಲಿತರಿಗಾಗಿ ಸಂವಿಧಾನ ಬರಿಯಲಿಲ್ಲ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ಬರೆದಿರುವ ಸಂವಿಧಾನ ವಿಶ್ವದ ಯಾವ ದೇಶದಲ್ಲಿಯೂ ಇಲ್ಲ. ಬೇರೆ ದೇಶಗಳು ನಮ್ಮ ಸಂವಿಧಾನವನ್ನು ಅನುಸರಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಸುಲೂರು ಆಂಜನಪ್ಪ, ಮುಖಂಡರಾದ ತಿರುಮಲೇಶ್​, ಮಂಜುನಾಥ್​, ಅಪ್ಪಿಗೌಡ, ಹರೀಶ್​, ವಿಶ್ವನಾಥಪುರ ಡಾ.ಬಿ.ಆರ್​.ಅಂಬೇಡ್ಕರ್​ ಸಂಘದ ಅಧ್ಯಕ್ಷ ಆನಂದ್​, ಉಪಾಧ್ಯಕ್ಷ ಮುತ್ತುರಾಜು, ನಿರ್ದೇಶಕ ಗಂಗಪ್ಪ, ಹನುಮಂತಪ್ಪ, ಮೂರ್ತಿ, ರಮೇಶ್​, ನಂಜುಂಡ, ಅಜಯ್​, ಅಭಿಷೇಕ್​, ರಾಜು, ಆನಂದ್​ ಇದ್ದರು.