ನ್ಯೂಸ್

ದಲಿತರ ಹೊಟ್ಟೆಪಾಡು | ಸಿದ್ದು-ಬಿಜೆಪಿ ವಾರ್: ದಲಿತರ ಪರ ಕೆಲಸ ನಿಮ್ಮ ಕರ್ತವ್ಯ ಎಂದ ಬಿಜೆಪಿ; ಬಿಜೆಪಿಗೆ 12 ಪ್ರಶ್ನೆ ಮುಂದಿಟ್ಟ ಸಿದ್ದರಾಮಯ್ಯ

rashmirhebbur

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಟ್ವಿಟ್ ವಾರ್ ಮುಂದುವರಿದಿದೆ. ಸಿದ್ದರಾಮಯ್ಯ ಅವರು ಬಿಜೆಪಿಯನ್ನು ದಲಿತ ವಿರೋಧಿ ಎಂದು ಟೀಕಿಸಿ ತಮ್ಮ ಸರ್ಕಾರದ ಸಾಧನೆಗಳೊಂದಿಗೆ ಬಿಜೆಪಿಯ ಮುಂದೆ 12 ಪ್ರಶ್ನೆಗಳನ್ನು ಇಟ್ಟು ಟ್ವಿಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಟ್ವಿಟ್ ಮಾಡಿದೆ.

ಬಿಜೆಪಿ ಟೀಕೆಗಳೇನು?

  • ಮಾಜಿ ಸಚಿವ ಡಾ.ಎಚ್.ಸಿ, ಮಹದೇವಪ್ಪ ಅವರನ್ನು ದೂರವಿಟ್ಟಿದ್ದು ಹೊಟ್ಟೆ ಪಾಡಿಗಾಗಿಯೇ?
  • ಡಾ. ಜಿ. ಪರಮೇಶ್ವರ್ ಅವರ ಏಳಿಗೆ ಸಹಿಸದೆ ಈಗ ದಲಿತರ ಪರ ಹೇಳಿಕೆ ನೀಡುತ್ತಿರುವುದು ಹೊಟ್ಟೆಪಾಡಿಗಾಗಿಯೇ?
  • ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಯಾವ ಕಾರಣಕ್ಕಾಗಿ?
  • ಖರ್ಗೆ ಅವರನ್ನು ದೆಹಲಿಗೆ ಸಾಗ ಹಾಕಿದ್ದು ಹೊಟ್ಟೆ ಪಾಡಿಗಾಗಿಯೇ?
  • ಸಿದ್ದರಾಮಯ್ಯಗೆ ದಲಿತರು ಎಂದರೆ ಕೇವಲ ಮತಬ್ಯಾಂಕ್ ಮಾತ್ರವೇ?
  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಮುಂದೆ ನಿಂತು ದಲಿತ ಸಿಎಂ ಮಾಡುತ್ತೇನೆ ಎಂದು ಏಕೆ ಹೇಳುತ್ತಿಲ್ಲ?
  • ಅಧಿಕಾರ ಇದ್ದಾಗ ಮಾಡಿದ ಕೆಲಸಗಳು ಕರ್ತವ್ಯವೇ ಹೊರತು, ತಾನೇ ಮಾಡಿದ್ದು ಎಂದು ಬೀಗುವ ಅಗತ್ಯವಾದರೂ ಏನಿದೆ?

ಸಿದ್ದರಾಮಯ್ಯ ಪ್ರಶ್ನೆಗಳು...

  • ನನ್ನನ್ನು ಮುಸ್ಲಿಂ ವಿರೋಧಿ ಎಂದು ಬೊಬ್ಬಿಟ್ಟ ಪಕ್ಷ ಠೇವಣಿ ಕಳೆದುಕೊಂಡಿದೆ, ದಲಿತ ವಿರೋಧಿ ಎಂದು ಹೇಳುತ್ತಿರುವ ಪಕ್ಷಕ್ಕೂ ಜನ ಬುದ್ದಿ ಕಲಿಸುತ್ತಾರೆ.
  • ದಲಿತರ 581 ಕೋಟಿ ರೂ. ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ, ನಿಮ್ಮ ಸರ್ಕಾರ ಎಷ್ಟು ಮಾಡಿದೆ?
  • ನಮ್ಮ ಸರ್ಕಾರ 1494 ಕೋಟಿ ರೂ. ವೆಚ್ಚದಲ್ಲಿ ಎಸ್​ಸಿಎಸ್​ಟಿ ವಿದ್ಯಾರ್ಥಿ ನಿಲಯ, 1537 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ, 16 ವಿವಿಗಳಲ್ಲಿ 116 ಕೋಟಿ ರೂ. ವೆಚ್ಚದಲ್ಲಿ ಸ್ನಾತಕೋತ್ತರ ವಸತಿ ಶಾಲೆ ನಿರ್ವಿುಸಿದೆ. ಬಿಜೆಪಿ ಸರ್ಕಾರ ಏನು ಮಾಡಿದೆ?
  • ಅಂಬೇಡ್ಕರ್, ಜಗಜೀವನರಾಂ, ವಾಲ್ಮೀಕಿ ಹೆಸರಿನಲ್ಲಿ 8199 ಭವನಗಳನ್ನು 840 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿತ್ತು, ಬಿಜೆಪಿ ಸರ್ಕಾರ ಎಷ್ಟು ಭವನ ನಿರ್ವಿುಸಿದೆ?
  • ಎಸ್​ಸಿ, ಎಸ್​ಟಿ ಮತ್ತು ಅಲೆಮಾರಿಗಳ 72 ಸಮುದಾಯಗಳಿಗೆ 222 ಕೋಟಿ ರೂ.ಗಳ ವೆಚ್ಚದ ಶೈಕ್ಷಣಿಕ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದಿತ್ತು, ಬಿಜೆಪಿ ಸರ್ಕಾರದ ಸಾಧನೆ ಏನು?
  • ದಲಿತ ಸಮುದಾಯದ ಉದ್ಯಮಿಗಳಿಗೆ ಶೆ.4 ಬಡ್ಡಿದರದಲ್ಲಿ 10 ಕೋಟಿ ರೂ.ಗಳ ತನಕ ಸಾಲ ನೀಡುವ ಯೋಜನೆಯಲ್ಲಿ 1597 ಜನ 908 ಕೋಟಿ ರೂ. ಸಾಲ ಪಡೆದರು. ಬಿಜೆಪಿ ಯಾವ ಯೋಜನೆ ರೂಪಿಸಿದೆ?
  • ಹೋಬಳಿಗೊಂದು ವಸತಿ ಶಾಲೆ ಪರಿಶಿಷ್ಟರಿಗಾಗಿ ತೆರೆಯಲಾಯಿತು. 74300 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಶಾಲೆ ತೆರೆಯಲಾಗಿದೆ?
  • ಆಶ್ರಮ ಶಾಲೆಗಳಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳ ಭತ್ಯೆ 600, 750 ಮತ್ತು 850 ರೂ. ಇದ್ದದ್ದು 1300, 1500 ಮತ್ತು 1600 ರೂ.ಗಳಿಗೆ ನಮ್ಮ ಸರ್ಕಾರ ಹೆಚ್ಚಿಸಿತು. ಬಿಜೆಪಿ ಸರ್ಕಾರ ಎಷ್ಟು ಹೆಚ್ಚಿಸಿದೆ?
  • ಸರ್ಕಾರಿ ಗುತ್ತಿಗೆಯಲ್ಲಿ ಶೇ.18 ಮೀಸಲಾತಿ ಜಾರಿಗೆ ತರಲಾಯಿತು.
  • ಪರಿಶಿಷ್ಟ ನೌಕರರ ಮುಂಬಡ್ತಿಗಾಗಿ ಪ್ರತ್ಯೇಕ ಕಾಯ್ದೆ ರೂಪಿಸಲಾಯಿತು.
  • ಎಸ್​ಸಿಪಿ ಟಿಎಸ್​ಪಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ನಮ್ಮ ಸರ್ಕಾರ 88395 ಕೋಟಿ ರೂ.ಗಳನ್ನು ಈ ವರ್ಗಕ್ಕೆ ವೆಚ್ಚ ಮಾಡಲಾಯಿತು. ನನ್ನನ್ನು ದಲಿತ ವಿರೋಧಿ ಎನ್ನುವ ಬಿಜೆಪಿಗೆ ಬದ್ಧತೆ ಇದ್ದರೆ ಪ್ರಧಾನಿಗೆ ಹೇಳಿ ಇಡೀ ದೇಶದಲ್ಲಿ ಈ ಕಾಯ್ದೆ ರೂಪಿಸಲಿ? ಇದು ಬಿಜೆಪಿಗೆ ಸವಾಲು.

ಉಪಚುನಾವಣೆಯಲ್ಲಿ ಏನಾಗಿದೆ ಗೊತ್ತು

ಬೆಂಗಳೂರು: ಹಾನಗಲ್, ಸಿಂಧಗಿ ಉಪ ಚುನಾವಣೆಯಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿದೆ. ಯಾರು ಎಷ್ಟು ಹಣ ಹಂಚಿದ್ದಾರೆಂದೂ ಮಾಹಿತಿ ಇದೆ. ಉಪ ಚುನಾವಣೆಯಲ್ಲಿ ಸರ್ಕಾರದ ಸ್ವೇಚ್ಛಾಚಾರ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ದೀಪಾವಳಿ ಹಬ್ಬದ ಹಿನ್ನೆಲೆ ಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ತಮಿಳುನಾಡಿನಲ್ಲಿ ಜಯಲಲಿತಾ ಅನೇಕ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಜ್ಯೋತಿ ಬಸು ಕೂಡ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ನಮಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಇಷ್ಟವಿರಲಿಲ್ಲ. ಕುಮಾರಸ್ವಾಮಿ ಒತ್ತಾಯ ಮಾಡಿ ಅಭ್ಯರ್ಥಿ ಹಾಕಿದರು. ಉಪ ಚುನಾವಣೆಗೆ ಯಾರು ಎಷ್ಟು ಶ್ರಮ ಪಟ್ಟರು ಎಂಬುದು ಗೊತ್ತಿದೆ. ್ಲ ಸಿಂದಗಿ ಕ್ಷೇತ್ರದಲ್ಲಿ 38 ಸಾವಿರ ಮುಸ್ಲಿಂ ಮತದಾರರು ಇದ್ದರು. ನಮಗಿಲ್ಲ ಅಂದರೆ ಆ ಮತಗಳು ಕಾಂಗ್ರೆಸ್​ಗೆ ಹೋಗಿರುತ್ತವೆ. ದೇವೇಗೌಡರು ಅವರ ಮಗ ಸೇರಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ನಮ್ಮನ್ನು ಸೋಲಿಸಲು ಹೀಗೆ ಮಾಡಿದ್ದಾರೆ ಎಂದು ನಮ್ಮ ವಿರುದ್ಧ ಆಪಾದನೆ ಮಾಡಿದರು. ನಾಲ್ಕು ಸಾವಿರ ನಮಗೆ ಬಂದಿದೆ ಉಳಿದದ್ದು ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ: ಪೆಟ್ರೋಲ್, ಡಿಸೇಲ್ ಮೇಲಿನ ಸುಂಕವನ್ನು ಸಿದ್ದರಾಮಯ್ಯ ಹೇಳಿದ್ದಕ್ಕೆ ಮೋದಿಯವರು ಇಳಿಸಿದ್ದಾರೆ. ಮೋದಿಯವರು ಇನ್ನು 3 ವರ್ಷ ಇರುತ್ತಾರೆ. ಸಿದ್ದರಾಮಯ್ಯ ಯಂಗಸ್ಟರ್ ಹಾಗಾಗಿ ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಅಧ್ಯಕ್ಷರಿಗೂ ಟಾಂಗ್: ಎಂ.ಸಿ. ಮನಗೂಳಿಯವರೆ ಮಗನನ್ನು ಕಾಂಗ್ರೆಸ್​ಗೆ ಕಳುಹಿಸುವ ಆಸೆ ಹೊಂದಿದ್ದರು ಎಂದು ಹೇಳುತ್ತಾರೆ. ಪ್ರಾಣ ಹೋಗುವ ಮೊದಲೇ ನನ್ನ ಮಗನನ್ನು ನಿಮ್ಮ ಕೈಗೆ ಕೊಟ್ಟಿದ್ದೇವೆ ಎಂದು ಹೇಳಿದ್ದರಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕ್ರಿಯಾಶೀಲವಾಗಿ ಕೆಲಸ ಮಾಡಲು ತೀರ್ಮಾನ ಮಾಡಿದ್ದೇನೆ. ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.

ವಿದ್ಯುತ್ ಕೊರತೆ, ಕತ್ತಲೆಯತ್ತ ರಾಜ್ಯ: ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗುತ್ತಿದ್ದು, ಸದ್ಯದಲ್ಲಿಯೇ ಕತ್ತಲಲ್ಲಿ ಕರ್ನಾಟಕ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಇತರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು. ಆದರೆ ಈಗ ಅಭಾವ ಸೃಷ್ಟಿಯಾಗಿದೆ ಎಂದರು.

ಸಿದ್ಧಾಂತ ಒಪ್ಪಿ ಬರಲಿ: ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸಿಂಧಗಿಯಲ್ಲಿ ಅಶೋಕ್ ಮನಗೊಳಿ ಅಭ್ಯರ್ಥಿ ಮಾಡುವ ಮೊದಲು ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿದ್ದೆವು. ಇನ್ನೂ ಹಲವರು ಪಕ್ಷಕ್ಕೆ ಬರುವವರು ಇದ್ದಾರೆ ಅವರನ್ನ ಬೇಡ ಎಂದು ಹೇಳಲ್ಲ. ಕೆಲವರು ನನಗೆ ಆಗದಿರಬಹುದು, ಇನ್ನೂ ಕೆಲವರು ಬೇರೆಯವರಿಗೆ ಆಗದಿರಬಹುದು, ಆದರೆ ಪಕ್ಷ ಮುಖ್ಯ ಎಂದು ಹೇಳಿದರು.