ನ್ಯೂಸ್

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿ ಆ್ಯಸಿಡ್​ ಎರಚಿದ ದುರುಳರು; ಓರ್ವ ಅರೆಸ್ಟ್​, ತನಿಖೆಯಲ್ಲಿ ಬಯಲಾಯ್ತು ಮತ್ತಷ್ಟು ಆಘಾತಕಾರಿ ಅಂಶ

ಲಖನೌ: ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಆ್ಯಸಿಡ್ ಎರಚಿರುವ ಭೀಕರ ಘಟನೆ ಉತ್ತರಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ತಲೆಮಾರಿಸಿಕೊಂಡಿರುವ ಮೂವರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಸಲ್ಮಾನ್, ಜುಬೇರ್, ರಶೀದ್ ಮತ್ತು ಆರಿಫ್ ಎಂದು ಗುರುತಿಸಲಾಗಿದ್ದು, ಪೊಲೀಸರು ಇವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ. 

ಪ್ರಕರಣದ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುನ್ವರ್​ ಆಕಾಶ್​ ಸಿಂಗ್, ಜನವರಿ 02ರಂದು ಬಾಲಕಿ ಟೈಲರ್ ಮನೆಗೆ ಹೋಗುತ್ತಿದ್ದಾಗ ಆಕೆಯ ಶಾಲೆಯ ಬಳಿ ಮೂವರು ಕಾರಿನಲ್ಲಿ ಅಪಹರಿಸಿದ್ದರು. ಬಳಿಕ ಆಕೆಯನ್ನು ಭೋಜ್​​ಪುರ್​ ಪ್ರದೇಶದ ಮನೆಯೊಂದಲ್ಲಿ ಕೂಡಿ ಹಾಕಿದ್ದ ಆರೋಪಿಗಳು ಆಕೆಯ ಮೇಲೆ ಎರಡು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತೆಯ ಕೈ ಮೇಲಿದ್ದ ಓಂ ಟ್ಯಾಟೂವನ್ನು ಆರೋಪಿಗಳು ಆ್ಯಸಿಡ್ ಹಾಕಿ ಸುಟ್ಟಿ ಹಾಕಿದ್ದು, ಆಕೆಗೆ ಬಲವಂತವಾಗಿ ಮಾಂಸವನ್ನು ತಿನ್ನಿಸಿದ್ದಾರೆ. ಆರೋಪಿಗಳು ಇಲ್ಲದಿರುವ ಸಮಯ ನೋಡಿಕೊಂಡು ಸಂತ್ರಸ್ತೆ ತಪ್ಪಿಸಿಕೊಂಡು ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದು, ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ದೂರು ನೀಡಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಓರ್ವ ಆರೋಪಿ ಸಲ್ಮಾನ್ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೋಕ್ಸೋ, ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್​ಐಆರ್​ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುನ್ವರ್​ ಆಕಾಶ್​ ಸಿಂಗ್ ತಿಳಿಸಿದ್ದಾರೆ.