ನ್ಯೂಸ್

ದಲಿತ ಸಮುದಾಯಕ್ಕೆ ದ್ರೋಹ ಖರ್ಗೆ ಮಾತನಾಡಿಲ್ಲ ಏಕೆ?ಕಾಂಗ್ರೆಸ್ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

Bengaluru - Political - Shivananda Tagadur

ಬೆಂಗಳೂರು:
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಹಗರಣಗಳ ಕುರಿತು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಯಾಕೆ ಬಾಯಿ ಬಿಡದೆ ಮೌನವಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಝೀರೊ ಟಾಲರೆನ್ಸ್ ಫಾರ್ ಕರಪ್ಶನ್ ಎಂದು ಹೇಳಿಕೆ ಕೊಟ್ಟಿದ್ದ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ? ಭ್ರಷ್ಟಾಚಾರಕ್ಕೆ ಅವರ ಅನುಮತಿ ಇದೆಯೇ? ಇಲ್ಲಿನ ವಿಚಾರಗಳು ಅವರ ಗಮನಕ್ಕೆ ಬಂದಿಲ್ಲವೇ ಎಂದು ಕೇಳಿದರು.
ನಮ್ಮ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಲ್ಮೀಕಿ ಹಗರಣ ಬೆಳಕಿಗೆ ಬಂದಾಗ ದಲಿತರಿಗೆ ಅನ್ಯಾಯವಾಗಿದೆ ಎಂದರೂ ಮಾತನಾಡಲಿಲ್ಲ. ಹಗರಣಗಳನ್ನು ಮುಂದಿಟ್ಟು ಹೋರಾಡಿದಾಗಲೂ ಪ್ರತಿಕ್ರಿಯಿಸಲಿಲ್ಲ ಎಂದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಬಿಜೆಪಿ ನಿರಂತರ ಹೋರಾಟಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನೂ ನಡೆಸಿದೆ. ಇಡೀ ದಲಿತ ಸಮುದಾಯ ನಿಮ್ಮನ್ನು ನಂಬಿ ಮತ ನೀಡಿತ್ತು. ಈಗ ದಲಿತ ಸಮುದಾಯಕ್ಕೆ ದ್ರೋಹ ಮಾಡಿರುವುದು ಸರಿಯೇ ಎಂದು ಕೇಳಿದರು.

ಡಿಸಿಎಂ ಉದ್ಧಟತನ:
ವಿರೋಧ ಪಕ್ಷಗಳು, ಪತ್ರಕರ್ತರು ಎಷ್ಟೇ ಬೈದರೂ ನೀರಿನ ದರ ಏರಿಸದೆ ಬಿಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಉದ್ಧಟತನದ ಮಾತುಗಳನ್ನಾಡಿದ್ದಾರೆ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದರು.
ತೆರಿಗೆ ಹೆಚ್ಚು ಕೊಡಲು ಬೆಂಗಳೂರಿನ ನಾಗರಿಕರು ಬೇಕು. ಸವಲತ್ತುಗಳಿಗೆ ಅವರು ದೂರ ಇರಬೇಕೇ? ಬೆಂಗಳೂರಿನ ಜನರ ಬಗ್ಗೆ ಉಗ್ರ ಮಾತನಾಡುವ ನಿಮ್ಮ ಅವಶ್ಯಕತೆ ಬೆಂಗಳೂರಿನ ಜನತೆಗೆ ಇದೆಯೇ ಎಂದರು. ಈಗ ತೆರಿಗೆ ಜೊತೆಗೇ ಅನಧಿಕೃತವಾಗಿ ಚದರಡಿ (ಸ್ಕ್ವೇರ್ ಫೀಟ್) ಟ್ಯಾಕ್ಸ್ ಕೂಡ ಹಾಕಿದ್ದೀರಲ್ಲವೇ? ಅವರಿಗೆ ಉತ್ತಮ ರಸ್ತೆ, ಸಮರ್ಪಕ ಚರಂಡಿ ಸೌಲಭ್ಯ ಸೇರಿ ಎಲ್ಲ ಸವಲತ್ತುಗಳನ್ನು ಮೊದಲು ಕೊಟ್ಟು ಆಮೇಲೆ ಹಾಕಿ ಎಂದು ಸಲಹೆ ನೀಡಿದರು.
ನೀವೇ ಮಾಡಿದ ಆದೇಶಗಳನ್ನು ನೀವೇ ಉಲ್ಲಂಘಿಸುತ್ತೀರಿ. ವರ್ಗಾವಣೆಯ ದಂಧೆಯೇ ನಡೆಯುತ್ತಿದೆ ಎನ್ನುವ ಮಾತು ಕೇಳಿಸುತ್ತಿದೆ. ಇದೊಂದೇ ದಂಧೆ ಬಾಕಿ ಉಳಿದಿತ್ತಲ್ಲವೇ ನಿಮಗೆ ಎಂದು ಕೇಳಿದರು. ನಿನ್ನೆಯ ಆದೇಶಕ್ಕೆ ಇವತ್ತು ಬೆಲೆ ಇಲ್ಲದಿದ್ದರೆ ಇದೆಂಥ ಸರ್ಕಾರ ಎಂದು ಕೇಳಿದರು.
ಮೂಡದ ವಿಷಯದಲ್ಲಿ ಅಧಿವೇಶನದಲ್ಲಿ ಉತ್ತರಿಸಲು ಕಷ್ಟವೆಂದು ಒಂದು ದಿನ ಮೊದಲೇ ಎಸ್‌ಐಟಿ ರಚಿಸಿ ತನಿಖೆಗೆ ಕೊಟ್ಟಿದ್ದೀರಿ. ಇದರ ಉದ್ದೇಶ ಏನು? ಇದು ಸರಿಯೇ? ನಾವು ಉತ್ತರ ಕೊಡಿ ಎಂದಾಗ ಅಧಿವೇಶನವನ್ನು ಮುಂದೂಡಿ ಓಡಿ ಹೋದಿರಿ. ಅಧಿವೇಶನ ಮುಂದೂಡಿ ಮರುದಿನ ಪತ್ರಿಕಾಗೋಷ್ಠಿ ಮಾಡಿದ್ದೀರಲ್ಲವೇ? ಅದನ್ಯಾಕೆ ಅಲ್ಲೇ ಮಾತನಾಡಿಲ್ಲ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಸಿಎಂ, ಡಿಸಿಎಂ ನುಣುಚಿಕೊಳ್ಳುವ ತಂತ್ರ..
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹೇಗಾದರೂ ಮಾಡಿ ಟ್ರ್ಯಾಪ್ ಮಾಡಲು, ಚರ್ಚೆಗೆ ಎಳೆಯಲು ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ಮಾಡುತ್ತಿದೆ ಎಂದು ಛಲವಾದಿ ದೂರಿದರು.
ಸಿಎಂ ಮತ್ತು ಡಿಸಿಎಂ ಪ್ರತಿದಿನ ಬರುವ ಸಮಸ್ಯೆಗಳಿಂದ ನುಣುಚಿಕೊಳ್ಳಲು ಯೋಚಿಸುತ್ತಾರೆ. ಆಗ ಅವರು ಕುಮಾರಸ್ವಾಮಿ ಜ್ಞಾಪಕ ಬರುತ್ತಾರೆ. ಇದರಿಂದಾಗಿ ಹೇಳಿಕೆ- ಪ್ರತಿ ಹೇಳಿಕೆ ವಾಗ್ವಾದ ನಡೆಯುತ್ತಿದೆ ಎಂದರು.
ಜೆಡಿಎಸ್ ಶಾಸಕರು, ಬಿಜೆಪಿ ಮುಖಂಡರು ನಾವು ಇಲ್ಲಿದ್ದು ಹೋರಾಟ ಮಾಡುತ್ತೇವೆ.
ನೀವು ಮೋದಿ ಅವರ ಜೊತೆ ಉತ್ತಮ ಕೆಲಸ ಮುಂದುವರೆಸಿ ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ ಅವರು, ನಿಮ್ಮನ್ನು ಟ್ರ್ಯಾಪ್ ಮಾಡಲು ಯಾರಿಂದಲೂ ಆಗುವುದಿಲ್ಲ ಎಂದರು.
ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಗೋಪಿನಾಥ್ ರೆಡ್ಡಿ ಹಾಜರಿದ್ದರು.