ಜೈಪುರ: ರಾಜಸ್ಥಾನದ ಬಂಡಿ ಜಿಲ್ಲೆಯಲ್ಲಿ ಸೋಮವಾರ ಭಾರಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ದಲಿತ ಯುವಕನೊಬ್ಬನ ಮದುವೆ ಮೆರವಣಿಗೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮದುವೆ ಮೆರವಣಿಗೆಗೆ ಮೇಲ್ಜಾತಿಯವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಬಹುದೆಂಬ ಭಯದಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯಲ್ಲಿ ಮೆರವಣಿಗೆ ನಡೆದಿದೆ.
ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಪರಶುರಾಮ್ ಮೇಘ್ವಾಲ್(25) ಮಂಗಳವಾರ ಬರಾನಾ ಜಿಲ್ಲೆಯ ಅಂತಾ ವಲಯದಲ್ಲಿ ಮದವೆ ಮಾಡಿಕೊಂಡರು. ಇದಕ್ಕೂ ಮುನ್ನ ಸೋಮವಾರ ಮದುವೆ ಮೆರವಣಿಗೆ ನಡೆಸಲಾಯಿತು.
ಈ ಬಗ್ಗೆ ಮಾತನಾಡಿರುವ ಬಂಡಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಜೋಶಿ, ಗ್ರಾಮದ ಮೇಲ್ಜಾತಿಯವರ ಪ್ರತಿಭಟಿಸಬಹುದೆಂಬ ಭಯದಿಂದ ವರ ಪರ್ಶುರಾಮ್ ಭದ್ರತೆ ಕೋರಿ ಜಿಲ್ಲಾಧಿಕಾರಿ ಮತ್ತು ಬಂಡಿ ಪೊಲೀಸ್ ವರಿಷ್ಠಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಮದುವೆ ಮೆರವಣಿಗೆಗ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಮೆರವಣಿಗೆ ವೇಳೆ ಆಡಳಿತಾಧಿಕಾರಿಗಳೊಂದಿಗೆ ತಹಸೀಲ್ದಾರ್ ಮತ್ತು ಬಂಡಿ ಜಿಲ್ಲೆಯ ಪಟ್ವಾರಿ ಪೊಲೀಸ್ ಆಡಳಿತದ 80 ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದ್ದರು. ಭಾರಿ ಭದ್ರತೆಯ ನಡುವೆ ಕುದುರೆ ಏರಿ ಮೆರವಣಿಗೆ ಹೊರಟ ವರ ಪರ್ಶುರಾಮ್ ಮದುವೆ ಕಾರ್ಯ ಯಾವುದೇ ಅಡ್ಡಿ, ಆತಂಕವಿಲ್ಲದೇ ಸುಸೂತ್ರವಾಗಿ ನೆರವೇರಿತು. (ಏಜೆನ್ಸೀಸ್)