ಬೆಂಗಳೂರು: ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದಲಿತರನ್ನು ವೋಟ್ ಬ್ಯಾಂಕ್‌ನಂತೆ ಬಳಸಿಕೊಂಡು ವಂಚಿಸುತ್ತಲೇ ಬಂದಿದೆ. ಈಗಲೂ ಅಷ್ಟೇ ದಲಿತ ಮುಖ್ಯಮಂತ್ರಿ ಎನ್ನುವುದು ಚರ್ಚೆಗೆ ಸೀಮಿತವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಸಿಎಂ ಆಗುವ ಅವಕಾಶವಿದ್ದಾಗ ಡಾ.ಜಿ.ಪರಮೇಶ್ವರ್ ರನ್ನು ಸೋಲಿಸಿ ಮೂಲೆಗುಂಪು ಮಾಡಿದರು. ಈಗ ಕಾಲಾವಧಿ ಇದೆಯಲ್ಲ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಪಕ್ಷದ ಒಡಕು ಮರೆಮಾಚಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದ ಛಲವಾದಿ ನಾರಾಯಣಸ್ವಾಮಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದ ಕಾರು ಅಪಘಾತದ ಬಗ್ಗೆ ಅನುಮಾನ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಅಗತ್ಯವೆಂದು ಪುನರುಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಆಗಲಿ ಎಂಬ ಘೋಷಣೆಗಳು ಮೊಳಗಿವೆ. ಈ ವೇಳೆ ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅಪಮಾನಿಸಲಾಗಿದೆ. ಇದನ್ನು ಸಹಿಸಿಕೊಂಡು ಸಿದ್ದರಾಮಯ್ಯ ಅದ್ಹೇಗೆ ಸುಮ್ಮನಿದ್ದಾರೋ ತಿಳಿಯದು. ನಾನಾಗಿದ್ದರೆ ಒಂದು ಕ್ಷಣವೂ ಇರದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ ಎಂದು ಕಾಲೆಳೆದರು.
ಯೋಗ ಇದ್ದವರು ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಯೋಗ್ಯತೆ ಇದ್ದವರು ಒಳ್ಳೆಯ ಸಿಎಂ ಆಗುತ್ತಾರೆ. ಸಿಎಂ ಆಗುವುದಕ್ಕೆ ಯೋಗದ ಜತೆಗೆ ಯೋಗ್ಯತೆಯು ಅಷ್ಟೇ ಮುಖ್ಯವೆಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕುಟುಕಿದರು.
ಗಾಂಧೀಜಿ ಹೇಳಿದರೂ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಜೀವಿತಾವಧಿಯುದ್ದಕ್ಕೂ ಅಪಮಾನಿಸಿ, ಚುನಾವಣೆಯಲ್ಲಿ ಸೋಲಿಸಿದರು. ಬಾಬಾ ಸಾಹೇಬ್ ನಿಧನರಾದಾಗ ಸಮಾಧಿಗೆ ದೆಹಲಿಯಲ್ಲಿ ಒಂದಿಂಚು ಜಾಗ ನೀಡಲಿಲ್ಲ. ಕಾಂಗ್ರೆಸ್ ನಾಯಕರು ಈಗ ಗಾಂಧೀಜಿ, ಡಾ.ಅಂಬೇಡ್ಕರ್ ನಾಮ ಜಪಿಸುತ್ತಿದ್ದಾರೆ ಎಂದು ಸಿ.ಟಿ.ರವಿ ಅಣಕವಾಡಿದರು.