ಬೆಂಗಳೂರು: ಗುತ್ತಿಗೆದಾರರ ಸಂಘ ಹಾಗೂ ಅಬಕಾರಿ ಗುತ್ತಿಗೆದಾರರು ಮಾಡಿದ್ದ ಸರ್ಕಾರದಲ್ಲಿನ ಕಮಿಷನ್ ಆರೋಪದ ಬೆನ್ನ ಹಿಂದೆಯೇ ದಲಿತ ಉದ್ದಿಮೆದಾರರೂ ಕಮಿಷನ್ ಆರೋಪ(Dalit businessmen allege commission; outrage against government) ಮಾಡಿದ್ದಾರೆ.
ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿರುವ ದಲಿತ ಉದ್ಯಮಿಗಳು, 1 ಕೋಟಿ ರೂ. ಸಾಲ ಪಡೆಯಲು ಎಲ್ಲ ಹಂತದಲ್ಲಿ 15 ಲಕ್ಷ ರೂ. ಲಂಚ ಕೇಳುತ್ತಾರೆ. ಹೆಜ್ಜೆ ಹೆಜ್ಜೆಗೂ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ದಲಿತರು ಎನ್ನುವ ಕಾರಣಕ್ಕೆ ಅಧಿಕಾರಿಗಳು ಅಸಡ್ಡೆ ಮಾಡುತ್ತಾರೆ. ಬ್ಯಾಂಕ್‌ಗಳು ಸಾಲ ನೀಡಲು ಸತಾಯಿಸುತ್ತಿವೆ. ಉದ್ಯಮ ಆರಂಭಿಸಲು ಸರ್ಕಾರದಿಂದ ಹಳ್ಳ, ತಗ್ಗು, ಗುಂಡಿ, ವ್ಯಾಜ್ಯ ಇರುವ ಹಾಗೂ ಮೂಲಸೌಕರ್ಯವೇ ಇಲ್ಲದ ಕಡೆಗಳಲ್ಲಿ ಜಾಗ ಲಭ್ಯವಾಗುತ್ತದೆ. 10-12 ವರ್ಷ ಅಲೆದರೂ ಜಮೀನು ಮಂಜೂರು ಮಾಡುವುದಿಲ್ಲ. ಇ-ಖಾತಾ ಪಡೆಯಲು ಲಕ್ಷ ಲಕ್ಷ ಲಂಚ ಕೇಳುತ್ತಾರೆ ಎಂದು ಅಳಲು ತೋಡಿಕೊಂಡರು.
ಅನೇಕ ಅಧಿಕಾರಿಗಳು ಕಚೇರಿಗೆ ಹೋದರೂ ಭೇಟಿಗೆ ನಿರಾಕರಿಸುತ್ತಾರೆ. ದಲಿತರು ಎಂಬ ಕಾರಣಕ್ಕೆ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ ಎಂದು ದೂರುಗಳ ಸುರಿಮಳೆಗೈದರು.
ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್(C G Srinivasan) ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತರಿಗೆ ಮೀಸಲಿಟ್ಟ ಅನುದಾನದಲ್ಲಿ ದಲಿತ ಉದ್ಯಮಕ್ಕೆ ಶೇ.1 ರಷ್ಟನ್ನೂ ಕೊಡುತ್ತಿಲ್ಲ. ಶೇ.3 ಕೊಟ್ಟರೆ ಈ ವರ್ಗಕ್ಕೆ ಅನುಕೂಲವಾಗುತ್ತದೆ. ಅಧಿಕಾರಶಾಹಿ ಕುಲಗೆಟ್ಟಿದೆ. ಅವರೇ ದರ್ಬಾರ್ ನಡೆಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಸಂಘದ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ(L Hanumantaiah) ಮಾತನಾಡಿ, ದಲಿತ ಉದ್ದಿಮೆದಾರರ ಸಮಸ್ಯೆಗಳನ್ನು ಈಗಾಗಲೇ ಸಿಎಂ ಹಾಗೂ ಸಿಎಸ್ ಜತೆ ಅನೇಕ ಬಾರಿ ಚರ್ಚಿಸಿದ್ದೇವೆ. ಸರ್ಕಾರದ ಹಂತದಲ್ಲಿ 85 ಸಭೆ ನಡೆಸಿ ಸಮಾಲೋಚನೆ ಮಾಡಲಾಗಿದೆ. ಆದರೆ ಯಾವುದೇ ತೀರ್ಮಾನ ಅನುಷ್ಠಾನವಾಗಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
-ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ ಎಸ್ಸಿ/ಎಸ್ಟಿ ಉದ್ದಿಮೆದಾರರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಅನುದಾನ ನೀಡಬೇಕು.
-2019ರ ನಂತರ ದಲಿತ ಉದ್ದಿಮೆದಾರರು ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಅನುದಾನ ಹೆಚ್ಚಿಸಬೇಕು.
-2009ರ ನಂತರ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ಒಟ್ಟು 271.8 ಎಕರೆ ಬ್ಯಾಕ್‌ಲಾಗ್ ಇದ್ದು, ಅದನ್ನು ಸರಿದೂಗಿಸಬೇಕು.
-ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಗೆ ಲಭ್ಯವಿರುವ ಒಟ್ಟು ವಿಸ್ತೀರ್ಣದಲ್ಲಿ ಶೇ.25 ಎಸ್‌ಸಿ/ಎಸ್ಟಿ ಜನಾಂಗದವರಿಗೆ ಹಂಚಿಕೆ ಮಾಡಬೇಕು.
- ಕೆಎಸ್‌ಎ್ಸಿ ನೀಡುತ್ತಿರುವ ಅವಧಿ ಸಾಲಕ್ಕೆ ಸರ್ಕಾರ ನೀಡುತ್ತಿರುವ ಭೂ ಸಹಾಯಧನವನ್ನು ಕೊಲ್ಯಾಟರಲ್ ಸೆಕ್ಯೂರಿಟಿಯಾಗಿ ಮತ್ತು ಪ್ರವರ್ತಕರ ಬಂಡವಾಳವಾಗಿ ಪರಿಗಣಿಸಬೇಕು.
- ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದಲಿತರು ಪಡೆದಿರುವ ಅವಧಿ ಸಾಲದ ಬಡ್ಡಿ ಸಹಾಯಧನವನ್ನು ಸಕಾಲದಲ್ಲಿ ಸರ್ಕಾರ ಪಾವತಿಸಬೇಕು.
- ನೇಕಾರರ ಪ್ಯಾಕೇಜ್ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಘಟಕಗಳ ಗುರಿ ಹೆಚ್ಚಿಸಬೇಕು.
*2014ಕ್ಕಿಂತ ಹಿಂದಿನ ಕೈಗಾರಿಕೆ ಪ್ರದೇಶದಲ್ಲಿ ಶೇ.25 ನಿವೇಶನ ಕೊಡುವಂತಾಗಬೇಕು. ಕೆಲವು ಕಡೆ ಸಮಸ್ಯೆ ಇದ್ದು ಪರಿಹಾರ ಮಾಡಬೇಕು.
-ಆರ್.ಮಂಜುನಾಥ್, ಜಿಲ್ಲಾಧ್ಯಕ್ಷ, ದಲಿತ ಉದ್ದಿಮೆದಾರರ ಸಂಘ, ಮೈಸೂರು
*ಪ್ರಾಜೆಕ್ಟ್ ಕ್ಲಿಯರೆನ್ಸ್‌ಗೆ ಹೋದರೆ ಚಕ್ರವ್ಯೆಹದಲ್ಲಿ ಸಿಲುಕಿಕೊಂಡಂತಾಗುತ್ತದೆ. ಕಮಿಷನ್/ಪರ್ಸೆಂಟೇಜ್ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತದೆ. ಅದಕ್ಕೆ ನಮ್ಮ ಬಳಿ ದಾಖಲೆಗಳೂ ಇವೆ.
-ಗಿರೀಶ್, ದಲಿತ ಉದ್ದಿಮೆದಾರರು
*ಕರ್ನಾಟಕದಲ್ಲಿ ಭೂಮಿ ದರ ಹೆಚ್ಚಿದೆ. ಲ್ಯಾಂಡ್ ಅಲಾಟ್ ಮಾಡಿಸಿಕೊಂಡರೆ ಮೂಲಸೌಲಭ್ಯ ಕಲ್ಪಿಸಲು ಐದಾರು ವರ್ಷ ಆಗುತ್ತದೆ.
-ಆದರ್ಶ ಯಲ್ಲಪ್ಪ, ದಲಿತ ಉದ್ದಿಮೆದಾರರು
*ಅಧಿಕಾರಿಗಳು ದಲಿತರು ಎನ್ನುವ ಕಾರಣಕ್ಕೆ ನಮ್ಮ ಜತೆ ಮಾತನಾಡೋದೇ ಇಲ್ಲ, ಏನೇ ಕೇಳಿದರೂ ಸತಾಯಿಸುತ್ತಾರೆ. ದಲಿತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಫೋನ್ ತೆಗೆಯುವುದಿಲ್ಲ.
-ಚಂದ್ರಶೇಖರ್, ಜಿಲ್ಲಾಧ್ಯಕ್ಷ, ದಲಿತ ಉದ್ದಿಮೆದಾರರ ಸಂಘ, ಚಿತ್ರದುರ್ಗ
*ಸಿಬಿಲ್ ಸ್ಕೋರ್ ನೆಪದಲ್ಲಿ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ. ಸಿಬಿಲ್ ಸ್ಕೋರ್ ತೆಗೆದು ಹಾಕಬೇಕು. ದಲಿತರು ಉದ್ದಿಮೆದಾರರಾಗಿ ದೇಶಕ್ಕೆ ಕೊಡುಗೆ ಕೊಡುತ್ತಿದ್ದಾರೆ, ಉದ್ಯೋಗದಾತರಾಗುತ್ತಿದ್ದಾರೆ.
-ಮೋಹನಾಂಗಯ್ಯ ಸ್ವಾಮಿ, ಜಿಲ್ಲಾಧ್ಯಕ್ಷ, ದಲಿತ ಉದ್ದಿಮೆದಾರರ ಸಂಘ, ಉಡುಪಿ