ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯದ್ ನಾಸಿರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ಬಾಅಲವಿ ಅವರು ಝೀನತ್ ಬಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.
ಮಂಗಳೂರು: ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯದ್ ನಾಸಿರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ಬಾಅಲವಿ ಮಂಗಳೂರಿನ ಬಂದರ್ ಅನ್ಸಾರಿ ರಸ್ತೆಯಲ್ಲಿರುವ ಝೀನತ್ ಬಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.
ಕೇರಳ ಮುಸ್ಲಿಂ ಲೀಗ್ ಅಧ್ಯಕ್ಷ ಸೈಯದ್ ಸ್ವಾದಿಕ್ ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂಗಳೂರು ತನ್ನದೇ ಆದ ಇಸ್ಲಾಮಿಕ್ ಚರಿತ್ರೆಯನ್ನು ಹೊಂದಿದೆ. ನಮ್ಮ ಹಿರಿಯರು ಧರ್ಮ ಪ್ರಚಾರಕ್ಕೆ ಇಲ್ಲಿಗೆ ಬಂದಾಗ ಇಲ್ಲಿನ ಸಹೋದರ ಧರ್ಮೀಯರು ಅತ್ಯಂತ ಆದರದಿಂದ ಸ್ವಾಗತಿಸಿದ್ದರು. ಅಂತಹ ಮಂಗಳೂರನ್ನು ಕೇಂದ್ರೀಕರಿಸಿಕೊಂಡು ದ.ಕ.ಜಿಲ್ಲೆಯ ಖಾಝಿಯಾಗಿ ಅಧಿಕಾರ ಸ್ವೀಕರಿಸಿರುವ ಸೈಯದ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ಅವರಿಗೆ ಹೊಣೆಗಾರಿಕೆ ನಿರ್ವಹಿಸಲು ಅಲ್ಲಾಹನು ಅನುಗ್ರಹಿಸಲಿ ಎಂದರು.
ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಅಧ್ಯಕ್ಷ ಡಾ. ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಝಿ ಹುದ್ದೆಯು ಕೇವಲ ಒಂದು ಗೌರವದ ಸ್ಥಾನವಲ್ಲ; ಅದು ಧಾರ್ಮಿಕ ಮಾರ್ಗದರ್ಶನ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಪ್ರಮುಖ ಹಾಗೂ ಗುರುತರವಾದ ಹೊಣೆಗಾರಿಕೆಯಾಗಿದೆ. ಪವಿತ್ರ ಪರಂಪರೆ ಹಾಗೂ ಅಗಾಧ ಧಾರ್ಮಿಕ ಜ್ಞಾನ ಹೊಂದಿರುವ ಸೈಯದ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ತಂಗಳ್ ಅವರ ನಾಯಕತ್ವದಲ್ಲಿ ನಮ್ಮ ಸಮಾಜವು ಇನ್ನಷ್ಟು ಒಗ್ಗಟ್ಟು ಮತ್ತು ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಆರೋಗ್ಯ ಸಚಿವ ಯು.ಟಿ. ಖಾದರ್, ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಸಮಸ್ತ ಕೋಶಾಧಿಕಾರಿ ಶೈಖುನಾ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಎಸ್‌ವೈಎಸ್ ಕೇಂದ್ರ ಕಾರ್ಯದರ್ಶಿ ಅಬ್ದುಸ್ಸಮದ್ ಪುಕೋಟೂರು, ಸೈಯದ್ ಆಟಕೋಯ ತಂಙಳ್ ಕುಂಬೋಳ್, ಕವರತ್ತಿ (ಲಕ್ಷದ್ವೀಪ) ಖಾಝಿ ಸೈಯದ್ ಇ.ಪಿ. ಸೈದಾಲಿ ತಂಙಳ್, ಕರ್ನಾಟಕ ಹಜ್ ಸಮಿತಿಯ ಸದಸ್ಯ ಸೈಯದ್ ಅಶ್ರಫ್ ತಂಙಳ್ ಆದೂರು, ಸೈಯದ್ ಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕ, ಕಾಂಞಂಗಾಡ್ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಬಶೀರ್ ವೆಳ್ಳಿಕೋತ್, ಸಿ.ಎಂ. ಉಸ್ತಾದ್‌ರ ಪುತ್ರ ಶಾಫಿ ತಳಂಗರೆ, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಅಧ್ಯಕ್ಷ ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಬಳ್ ಸೇರಿದಂತೆ ಸಮಸ್ತದ ಪ್ರಮುಖ ಉಲವಾಗಳು, ವಿವಿಧ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ನೂತನ ಖಾಝಿಯ ಪರಿಚಯ ವಾಚಿಸಿದರು. ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು. ಹನೀಫ್ ಹುದವಿ ದೇಲಂಪಾಡಿ ಪ್ರಾಸ್ತಾವಿಸಿದರು. ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್ ಉಪಾಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ವಂದಿಸಿದರು. ವಿದ್ಯಾರ್ಥಿ ನಜ್ಮುದ್ದೀನ್ ಕಿರಾಅತ್ ಪಠಿಸಿದರು.