ನ್ಯೂಸ್

ಜನವರಿ 9ರಿಂದ ಬೆಂಗಳೂರಿನಲ್ಲಿ ದಕ್ಷಿಣ ಡೈರಿ ಶೃಂಗಸಭೆ- ಪ್ರಾದೇಶಿಕ ಸಮ್ಮೇಳನ

ಬೆಂಗಳೂರು: ದಕ್ಷಿಣ ವಲಯ ಭಾರತೀಯ ಡೈರಿ ಅಸೋಸಿಯೇಷನ್ ದಕ್ಷಿಣ ಭಾರತದಲ್ಲಿ ಹೈನೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಜ.9ರಿಂದ 11ರವರೆಗೆ ನಿಮ್ಹಾನ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ದಕ್ಷಿಣ ಡೈರಿ ಶೃಂಗಸಭೆ 2025 ಆಯೋಜಿಸಿರುವುದಾಗಿ ತಿಳಿಸಿದೆ.

3 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಹೈನುಗಾರಿಕೆ ವಲಯದ ಸಂಶೋಧಕರು, ತಜ್ಞರು, ವಿದ್ಯಾರ್ಥಿಗಳು, ರೈತರು, ವೃತ್ತಿಪರರು ಮತ್ತು ಆಯೋಜಕರು, ಜತೆಗೆ ಡೈರಿ ಉದ್ಯಮದ ಉದ್ಯಮಿಗಳು ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸುಮಾರು 10 ತಾಂತ್ರಿಕ ಮತ್ತು ವೈಜ್ಞಾನಿಕ ಗೋಷ್ಠಿಗಳು ನಡೆಯಲಿದ್ದು, ಪರಿಣಿತರು 40 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿಷಯ ತಜ್ಞರು ಹೈನುಗಾರಿಕೆ ಉದ್ಯಮ ಎದುರಿಸುತ್ತಿರುವ ಸವಾಲುಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದು ಭಾರತೀಯ ಡೈರಿ ಅಸೋಸಿಯೇಶನ್ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದಲ್ಲಿ ಡೈರಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುವುದು ಯುವ ಸಂಶೋಧಕರಿಗೆ ಸಂಶೋಧನೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು,ಜನವರಿ 9 ರಂದು ಪೋಸ್ಟರ್ ಪ್ರಸ್ತುತಿಯನ್ನು ಸಹ ಹಮ್ಮಿಕೊಂಡಿದ್ದೇವೆ ಎಂದರು.

ಭಾರತೀಯ ಡೈರಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ.ಆರ್.ಪಿ.ಅನೇಜ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಆನಂದ್ ಟೆಕ್ನೋ-ವಾಣಿಜ್ಯ ಎಕ್ ಪೋ ಉದ್ಘಾಟಿಸಲಿದ್ದಾರೆ. ಈ ವೇಳೆ ವೈಜ್ಞಾನಿಕ ಅಧಿವೇಶನ ನಡೆಯಲಿದ್ದು, ಇದರಲ್ಲಿ ಸುಮಾರು 30 ಪ್ರಖ್ಯಾತ ಭಾಷಣಕಾರರು ಹಾಲು ಉತ್ಪಾದನೆ ಮತ್ತು ಸಂಸ್ಕರಣೆಯ ವಿವಿಧ ಅಭಿವೃದ್ಧಿ ಅಂಶಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಹಾಲು ಒಕ್ಕೂಟದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಚೆನ್ನೇಗೌಡ, ಡಾ.ಬಿ.ಎಸ್.ಗಂಗಾಧರ, ತೆಲಂಗಾಣದ ದೊಡ್ಲ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ರೆಡ್ಡಿ, ಕೇರಳದ ಶಾಲಿನಿ ಗೋಪಿನಾಥ್, ತಮಿಳುನಾಡು ಕೊಯಮತ್ತೂರಿನ ಮಹಾಲಕ್ಷ್ಮಿ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಪೊನ್ನುಸಾಮಿ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಅಸೋಸಿಯೇಷನ ಕಾರ್ಯದರ್ಶಿ ಡಾ.ಎನ್. ಸುಭಾಷ್, ಖಚಾಂಚಿ ಡಾ.ಕೆ.ಎಸ್.ರಾಯ್, ನಾಗಪುರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಿ.ಎಸ್.ಪ್ರಸಾದ್, ನಬಾರ್ಡ್ ನ ನಿವೃತ್ತ ಮಹಾ ವ್ಯವಸ್ಥಾಪಕ ಡಾ.ಪ್ರಕಾಶ್ ದೇಸಾಯಿ ಮತ್ತಿತರಿದ್ದರು.