ಬೆಂಗಳೂರು:
ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ಕಿರಿ ಕಿರಿ ಇನ್ನೂ ತಪ್ಪಿಲ್ಲ. ಪ್ರತಿ ನಿತ್ಯ ವರ್ಗಾವಣೆಗಾಗಿ ಅರ್ಜಿಗಳು ಇಲಾಖೆಗೆ ಬರುತ್ತಲೇ ಇದ್ದು, ಸಚಿವಾಲಯವನ್ನು ಎಡತಾಕುತ್ತಿದ್ದಾರೆ.
ವರ್ಗಾವಣೆ ಅವಧಿ ಮುಗಿದಿದೆ ಎಂದು ಹಲವಾರು ಬಾರಿ ತಿಳಿಸಿದ್ದರೂ, ಜನರು ಅರ್ಜಿ ಹಿಡಿದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎದುರು ಬರುತ್ತಲೇ ಇದ್ದಾರೆ.
ಈಗ ವರ್ಗಾವಣೆ ಟೈಂ ಮುಗಿದಿದೆ ಎಂದು ಸ್ವತಃ ಸಚಿವರೇ ವಿವರಣೆ ನೀಡಿದರೂ ಅದನ್ನು ಒಪ್ಪಲು ಜನರು ತಯಾರಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದಾದರೂ ನೀವು ವರ್ಗಾವಣೆ ಮಾಡಿಸಿಕೊಡಲೇಬೇಕು ಎಂದು ಅವಲತ್ತುಕೊಳ್ಳುತ್ತಲೇ ಇದ್ದಾರೆ.
ಶಿಕ್ಷಣ ಇಲಾಖೆಯಷ್ಟೆ ದೊಡ್ಡ ಇಲಾಖೆಯಾಗಿರುವ ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ಕಿರ ಕಿರಿ ತಪ್ಪಿಸಿಕೊಳ್ಳಲು ಶಿಕ್ಷಣ ಇಲಾಖೆಯ ರೀತಿಯಲ್ಲಿ ಕೌನ್ಸೆಲಿಂಗ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಚಿವರು ಕೂಡ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.