ಹರಿಯಾಣ: ಕರೊನಾ ಹಾವಳಿ ಇರುವಾಗ ಪಟಾಕಿ ಹೊಗೆಯೂ ಸೇರಿಕೊಂಡರೆ ಕೋವಿಡ್-19 ಸೋಂಕಿತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಪಟಾಕಿಗೆ ನಿಷೇಧ ಹೇರಲಾಗಿದೆ.
ಅದರಂತೆ ಕರ್ನಾಟಕದಲ್ಲೂ ಪಟಾಕಿಗೆ ನಿಷೇಧ ಹೇರಿದ್ದು, ಕೇವಲ ಹಸಿರು ಪಟಾಕಿಗಳನ್ನಷ್ಟೇ ಸಿಡಿಸಲು ಅನುಮತಿ ನೀಡಲಾಗಿದೆ. ಉಳಿದಂತೆ ಪಶ್ಚಿಮ ಬಂಗಾಲ, ದೆಹಲಿ, ಹರಿಯಾಣಗಳಲ್ಲೂ ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.
ಆದರೆ ಹರಿಯಾಣದಲ್ಲಿ ಪಟಾಕಿ ಮೇಲೆ ನಿಷೇಧವಿದ್ದರೂ ಸಣ್ಣ ಸಡಿಲಿಕೆ ನೀಡಲಾಗಿದೆ. ಮಾಲಿನ್ಯ ಹೆಚ್ಚಳದ ಜತೆಗೆ ಕರೊನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಾಗ್ಯೂ ನಾವು ಪಟಾಕಿ ಮಾರಾಟ ಹಾಗೂ ಬಳಕೆಗೆ ವಿಧಿಸಲಾದ ನಿರ್ಬಂಧದಲ್ಲಿ ಸಣ್ಣ ಸಡಿಲಿಕೆ ನೀಡುತ್ತಿದ್ದೇವೆ. ನಿರ್ಬಂಧವಿದ್ದರೂ ದಿನದಲ್ಲಿ ನಿಗದಿತ ಎರಡು ಗಂಟೆ ಅವಧಿಯಲ್ಲಿ ಪಟಾಕಿ ಸಿಡಿಸಬಹುದು. ಅದೇ ಸಂದರ್ಭದಲ್ಲಿ ಮಾರಾಟಗಾರರು ಪಟಾಕಿ ಮಾರಬಹುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. (ಏಜೆನ್ಸೀಸ್)