ನ್ಯೂಸ್

ಲಾಕ್​ಡೌನ್​ನಲ್ಲಿ ಅಪ್ಪ-ಮಗಳ ದಿನಕ್ಕೊಂದು ವೇಷ​!

ನವದೆಹಲಿ: ವಿಶ್ವಾದ್ಯಂತ ಕೋವಿಡ್​ 19 ಲಾಕ್​ಡೌನ್​ ಜಾರಿಯಲ್ಲಿದೆ. ಇದರಿಂದಾಗಿ ಶಾಲೆ-ಕಾಲೇಜು, ಕಚೇರಿಗಳು, ಚಿತ್ರಮಂದಿರ, ಮಾಲ್​ ಸೇರಿ ಬಹುತೇಕ ಎಲ್ಲವೂ ಮುಚ್ಚಲ್ಪಟ್ಟಿವೆ. ಹೀಗಾಗಿ ಜನರು ತಮ್ಮ ಮನೆಯ ನಾಲ್ಕು ಗೋಡೆಗಳ ನಡುವೆ ಬಂದಿಯ ರೀತಿಯಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಗಿದೆ.

ವಿಶೇಷವಾಗಿ ಮಕ್ಕಳ ಪಾಲಿಗಂತೂ ಲಾಕ್​ಡೌನ್​ ಸಜೆಯಾಗಿದೆ. ಹೊರಗೆ ಹೋಗುವಂತಿಲ್ಲ, ಸ್ನೇಹಿತರೊಂದಿಗೆ ಆಡವಾಡುವಂತಿಲ್ಲ. ಉಳಿದ ಮಕ್ಕಳಂತೆ ಬೇಸರಗೊಂಡಿರುವ ತಮ್ಮ ಪುತ್ರಿಯನ್ನು ಖುಷಿಯಾಗಿಡಲು ಅಪ್ಪನೊಬ್ಬ ವಿಶೇಷ ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ.

ಮನೆಯ ಹತ್ತಿರದಲ್ಲಿರುವ ಕಸದ ತೊಟ್ಟಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಹಾಗೆ ಹೋಗುವಾಗ ಸ್ವತಃ ದಿನಕ್ಕೊಂದು ವೇಷ ಧರಿಸುವ ಅವರು ಪುತ್ರಿಗೂ ವೇಷ ಹಾಕಿಸುತ್ತಾರೆ. ಈ ರೀತಿಯಾಗಿ ಆಕೆಗೂ ರಂಜನೆ ಒದಗಿಸಿ, ಸಂತಸದಿಂದ ಇರುವಂತೆ ಮಾಡುತ್ತಿದ್ದಾರೆ.

ಒಂದು ದಿನ ಎಲ್ಸಾ ಮತ್ತು ಒಲ್ಫ್​ ರೀತಿಯ ವೇಷ ಧರಿಸಿದರೆ, ಮತ್ತೊಂದು ದಿನ ರಾಪುನ್ಜೆಲ್​ ಮತ್ತು ಸಾಕು ಊಸುರವಳ್ಳಿ ಪ್ಯಾಸ್ಕರ್​ ರೀತಿಯ ವೇಷ ಧರಿಸುತ್ತಿದ್ದಾರೆ. ಇದು ಇತರರಿಗೂ ಸ್ಫೂರ್ತಿ ಒದಗಿಸುತ್ತಿದೆ.

ಪುತ್ರಿಯೊಂದಿಗೆ ದಿನಕ್ಕೊಂದು ವೇಷ ಧರಿಸಿ ತ್ಯಾಜ್ಯ ವಿಲೇವಾರಿಗೆ ಹೋಗುವ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿರುವ ಅಪ್ಪ, ಆ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದನ್ನು ಕಂಡು, ಮಕ್ಕಳನ್ನು ಆರೈಕೆ ಮಾಡುವ, ಬೆಳೆಸುವ ಒಳ್ಳೆಯ ವಿಧಾನ ಇದು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.