ಮದ್ದೂರು: ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ನಳಿನಕುಮಾರಿ ಅವರನ್ನು ಪಟ್ಟಣದ ವಿವೇಕಾನಂದ ನಗರದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಅಭಿನಂದಿಸಲಾಯಿತು.
ತಾಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಡಿ.ನಳಿನಕುಮಾರಿ ಅವರು ತಾಲೂಕಿನ ಬೆಳತೂರು ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಡಿ.ದೇವಯ್ಯ ಅವರ ಪುತ್ರಿಯಾಗಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಡಿ.ನಳಿನಕುಮಾರಿ ಅವರು, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ನಿರ್ದೇಶಕರಾಗಿ, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಉಪಾಧ್ಯಕ್ಷೆಯಾಗಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಲ್ಲಿ, ಮದ್ದೂರು ತಾಲೂಕು ಬುದ್ಧಿಸ್ಟ್ ಒಕ್ಕೂಟದಲ್ಲಿ ಕಾರ್ಯಕಾರಿಣಿ ಮಂಡಳಿಯಲ್ಲಿ, ಜಿಲ್ಲೆಯ ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಒಕ್ಕೂಟ ಸೇರಿದಂತೆ ಇನ್ನಿತರ ಸಂಘಟನೆಗಳನ್ನು ಪ್ರತಿನಿಧಿಸುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಡಿ.ನಳಿನಕುಮಾರಿ, ಇಷ್ಟು ದಿನ ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ಭಾಗವಹಿಸಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ಈಗ ಗ್ರಾಪಂ ಅಧ್ಯಕ್ಷೆಯಾಗಿರುವುದರಿಂದ ಹೊಸಕರೆ ಗ್ರಾಮ ಪಂಚಾಯಿತಿಯನ್ನು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ರಾಚಯ್ಯ, ನಿರ್ದೇಶಕ ಬೂದಗುಪ್ಪೆ ಪುಟ್ಟಲಿಂಗಯ್ಯ, ಶ್ರೀನಿವಾಸ್, ಸುಮುಖ ನಿಧಿ ಟ್ರಸ್ಟ್ ಅಧ್ಯಕ್ಷ ಕುಂದನಕುಪ್ಪೆ ಕುಮಾರ್, ಅಹಿಂದ ಸಂರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ವಿಶ್ವ ಜ್ಞಾನಿ ಗ್ರಾಮಾಭಿವೃದ್ಧಿ ಟ್ರಸ್ಟ್ ಖಂಜಾಚಿ ಬಿ.ಪಿ.ಗಿರೀಶ್ ಮುಖಂಡರಾದ ದಾಕ್ಷಾಯಿಣಿ, ವೆಂಕಟೇಶ್, ಮೋಹನ್, ಎಂ.ಸೋಮಶೇಖರ್, ಟೈಲರ್ ಸುರೇಶ್, ವಾಸು ಇದ್ದರು.