ಮದ್ದೂರು: ಹೊಸಕೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾದ ಡಿ.ನಳಿನಾಕುಮಾರಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷೆ ಸುನಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ನಿವೃತ್ತ ಮುಖ್ಯಶಿಕ್ಷಕ ಡಿ.ದೇವಯ್ಯ ಅವರ ಮಗಳಾದ ಬೆಳತೂರು ಗ್ರಾಮದ ಡಿ.ನಳಿನಾಕುಮಾರಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಿಡಿಪಿಒ ಅರುಣ್‌ಕುಮಾರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಡಿ.ನಳಿನಕುಮಾರಿ ಅವರನ್ನು ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ ಕೆಂಪರಾಜು, ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಡಿ.ನಳಿನಾಕುಮಾರಿ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ ಮೈತ್ರಿ ಪಕ್ಷದ ಮುಖಂಡರಿಗೆ, ಗ್ರಾಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಯವುದೇ ಕಪ್ಪು ಚುಕ್ಕಿ ಬಾರದಂತೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ತಮ್ಮ ಅಧಿಕಾರಾವಧಿಯಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಗ್ರಾಪಂ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನರೇಗಾ ಯೋಜನೆಯನ್ನು ಪ್ರತಿ ಗ್ರಾಮದಲ್ಲೂ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಕಲ್ಪಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ದಯಾನಂದ, ಕೆ.ಟಿ.ಕೃಷ್ಪಪ್ಪ, ವೆಂಕಟೇಶ್, ಶಿವಲಿಂಗಯ್ಯ, ಬಿ.ಎಸ್.ಪ್ರಸನ್ನಕುಮಾರ್, ಮಹದೇವು, ಮಂಗಳಾ, ನಿರ್ಮಲಾ, ಶಾಂತಾ, ಸುಚಿ, ತಾಯಮ್ಮ, ಜಯಂತ್, ಎನ್.ಕೆ.ಮುರಳಿಕೃಷ್ಣ, ಮುಖಂಡರಾದ ಬೆಳ್ತೂರು ಚಂದ್ರಹಾಸ್, ಬಿಜೆಪಿ ಮುಖಂಡ ಕೆಂಪುಬೋರಯ್ಯ ಹಾಜರಿದ್ದರು.