ನ್ಯೂಸ್

ಗೃಹಜ್ಯೋತಿ ಗ್ರಾಹಕರಿಗೆ ಡಿ-ಲಿಂಕ್ ಸೌಲಭ್ಯ: ಮನೆ ಬದಲಿಸಿದರೂ ಚಿಂತೆಯಿಲ್ಲ

ಬೆಂಗಳೂರು: ಎಲ್ಲ ವರ್ಗದ ಮನೆ ಬಳಕೆ ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ‘ಗೃಹಜ್ಯೋತಿ ಯೋಜನೆ’ಗೆ ವರ್ಷದ ಸಂಭ್ರಮ. ಇದೇ ಸಂದರ್ಭದಲ್ಲಿ ಮನೆ ಬದಲಾಯಿಸುವ ಗ್ರಾಹಕರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ.

ಬಾಡಿಗೆ ಮನೆ ನಿವಾಸಿಗಳು ಅಥವಾ ಸ್ವಂತ ಮನೆಯುಳ್ಳವರು ಮನೆ ಬದಲಾಯಿಸಿದಾಗ ‘ಗೃಹ ಜ್ಯೋತಿ’ ಯೋಜನೆ ತಪ್ಪುತ್ತದಲ್ಲ ಎಂಬ ಚಿಂತೆಯನ್ನು ದೂರ ಮಾಡಿದೆ.

ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಕಲ್ಪಿಸಿದೆ. ಶ್ರಾವಣ ಮಾಸದಲ್ಲಿ ಸಾಲುಗಟ್ಟಿ ಬರುವ ಹಬ್ಬಗಳಿಗಾಗಿ ಕೊಡುಗೆ ನೀಡಿದೆ.

ಬಾಡಿಗೆ ಮನೆ ಅಥವಾ ಯಾವುದೋ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆ ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್.ಸಂಖ್ಯೆಯೊಂದಿಗೆ ನೋಂದಣಿ ಮಾಡಿ, ಯೋಜನೆಯ ಲಾಭ ಪಡೆಯಬಹುದಾಗಿದೆ.

ಡಿ-ಲಿಂಕ್ ಮಾಡುವುದು ಹೇಗೆ?

ಗ್ರಾಹಕರು (https://sevasindhu.karnataka.gov.in/GruhaJyothi_Delink/GetAadhaarData.aspx  ) ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ ( Cache Memory Clear ) ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದು.

ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್ .ಆರ್. ನಂಬರ್‌ಗೆ ಲಿಂಕ್ ಮಾಡಬಹುದು. ಅಂದರೆ ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ಗೃಹಜ್ಯೋತಿ ಸಬ್ಸಿಡಿ ವೆಚ್ಚ

ಗೃಹಜ್ಯೋತಿ ಯೋಜನೆಯಡಿ 2024ರ ಜೂನ್‌ವರೆಗೆ ಒಟ್ಟು ನೋಂದಣಿ-1.67 ಕೋಟಿ ಗ್ರಾಹಕರ ಹೆಸರು ನೋಂದಣಿ, ಒಟ್ಟು ಫಲಾನುಭವಿಗಳು-1.56 ಕೋಟಿ.

ಯೋಜನೆಯಡಿ 2023ರ ಆಗಸ್ಟ್‌ನಿಂದ 2024 ಜೂನ್‌ವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಸಬ್ಸಿಡಿ-8239 ಕೋಟಿ ರೂ.

ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಜತೆಗೆ ಡಿಲಿಂಕ್ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಿ, ಜನರಿಗೆ ಈ ಸೌಲಭ್ಯವನ್ನೂ ಒದಗಿಸಲಾಗಿದೆ. -ಕೆ.ಜೆ.ಜಾರ್ಜ್, ಇಂಧನ ಸಚಿವ.