ಬೆಂಗಳೂರು: ಐಶ್ವರ್ಯಗೌಡ ವಿರುದ್ಧದ ವಂಚನೆ ಪ್ರಕರಣ ಸಂಬಂಧ ನಗರದ ಶಾಂತಿನಗರದಲ್ಲಿನ ಜಾರಿ ನಿರ್ದೇಶನಾಲಯದ (ಇ.ಡಿ.) ಕಚೇರಿಗೆ ಆಗಮಿಸಿದ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರಿಗೆ ಇ.ಡಿ ಅಧಿಕಾರಿಗಳು 6 ಗಂಟೆಗಳ ಕಾಲ ಡ್ರಿಲ್ ನಡೆಸಿದ್ದಾರೆ.
ಸುರೇಶ್ ಅವರಿಗೆ ಇ.ಡಿ ಅಧಿಕಾರಿಗಳುದರು. ೬ ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಐಶ್ವರ್ಯಗೌಡ ಅವರು ನಿಮಗೆ ಹೇಗೆ ಪರಿಚಯ? ಅವರ ಜತೆ ನಿಮಗೆ ಹಣಕಾಸಿ ವ್ಯವಹಾರವಿತ್ತಾ? ಎಷ್ಟು ದಿನಗಳಿಂದ ಪರಿಚಯ? ಆಕೆ ಈ ಪ್ರಕರಣದಲ್ಲಿ ನಿಮ್ಮ ಹೆಸರನ್ನು ಹೇಳಲು ಕಾರಣವೇನು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಸುರೇಶ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳ ವಿರುದ್ಧ ಅಸಮಾಧಾನ:
ಸೋಮವಾರ ಬೆಳಗ್ಗೆ ೧೧ ಗಂಟೆಗೆ ವಿಚಾರಣೆಗೆ ಬರುವಂತೆ ಇ.ಡಿ ಸೂಚಿಸಿತ್ತು. ಆದರೆ, ಡಿ.ಕೆ ಸುರೇಶ್ ೧೧.೧೫ಕ್ಕೆ ವಿಚಾರಣೆಗೆ ಹಾಜರಾದರು. ಸ್ವಲ್ಪ ತಡವಾಗಿ ವಿಚಾರಣೆಗೆ ಬಂದ ಸುರೇಶ್ ಅವರನ್ನು ಕೆಲ ಕಾಲ ಇ.ಡಿ. ಕಚೇರಿಯ ಹೊರಗಡೆಯೇ ಕೂರಿಸಲಾಗಿತ್ತು. ನಂತರ ಕಚೇರಿಯ ರಿಜಿಸ್ಟರ್‌ನಲ್ಲಿ ಸಹಿ ಮಾಡುವಂತೆ ಸೂಚಿಸಲಾಯಿತು. ಸಹಿ ಮಾಡಿದ ಬಳಿಕವೂ ಸುರೇಶ್ ಅವರನ್ನು ಕಚೇರಿಯೊಳಗೆ ಬಿಡಲು ಅಧಿಕಾರಿಗಳು ವಿಳಂಬ ಮಾಡಿದರು. ಇದರಿಂದ ಅಸಮಾಧಾನಗೊಂಡ ಸುರೇಶ್, ಏರು ದನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಸುರೇಶ್ ಅವರ ಸಾಕಷ್ಟು ಬೆಂಬಲಿಗರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಇ.ಡಿ. ಕಚೇರಿ ಬಳಿ ೧೦೦ ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಏನಿದು ಪ್ರಕರಣ?
ಐಶ್ವರ್ಯಗೌಡ ತಾನು ಮಾಜಿ ಸಂಸದ ಡಿ.ಕೆ.ಸುರೇಶ್‌ರ ಸಹೋದರಿ ಎಂದು ಹೇಳಿಕೊಂಡು ಹಲವರಿಗೆ ವಂಚಿಸಿದ್ದರು. ಚಿನ್ನಾಭರಣ ಮಳಿಗೆಗಳಲ್ಲಿ ಸಾಲವಾಗಿ ಆಭರಣಗಳನ್ನು ಪಡೆದು ಬಳಿಕ ಹಣ ಕೊಡದೆ ಮೋಸ ಮಾಡಿದ್ದರು. ಈ ಸಂಬಂಧ ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್, ವಿಜಯನಗರ, ರಾಜರಾಜೇಶ್ವರಿನಗರ ಹಾಗೂ ಮಂಡ್ಯ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ೬ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ. ಐಶ್ವರ್ಯಗೌಡ ಅವರನ್ನು ಹಿಂದೆಯೇ ಬಂಧಿಸಿತ್ತು. ನಂತರ ಐಶ್ವರ್ಯಗೌಡ ಅವರು ಇ.ಡಿ. ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈ ಮಧ್ಯೆ ಇ.ಡಿ ಅಧಿಕಾರಿಗಳು ಜೂ. ೧೯ರಂದು ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಜೂ. ೨೩ರಂದು ವಿಚಾರಣೆಗೆ ಬರುವುದಾಗಿ ಕಾಲಾವಕಾಶ ಕೇಳಿದ್ದ ಸುರೇಶ್ ಅವರು ಬೆಳಗ್ಗೆ ವಿಚಾರಣೆಗೆ ಹಾಜರಾದರು.
ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ:
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, ಐಶ್ವರ್ಯಗೌಡ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಕಾರ್ಯಕ್ರಮಗಳಿಗೆ ಹೋಗಿದ್ದೆ. ಇದರ ಹೊರತಾಗಿ ಬೇರೇನೂ ಇಲ್ಲ. ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ. ಜುಲೈ ೭ರಂದು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಕರೆದಿದ್ದು, ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.