ನ್ಯೂಸ್

ಇದೇ ನೋಡಿ ನಮ್ಮ Someಕಲ್ಪ: ಮಾಜಿ ಸಚಿವ ಡಿಕೆಶಿಯವರ 2020ರ ನಿರ್ಣಯ ಏನಿರಬಹುದು?

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ಡಿ.ಕೆ.ಶಿ.

ಕಳೆದ ವರ್ಷ ನನ್ನ ಪಾಲಿಗೆ ಕರಾಳ ವರ್ಷವಾಗಿತ್ತು. ಡಿಕೆಶಿ ಎಂದೇ ಪ್ರಸಿದ್ಧನಾಗಿದ್ದ ನನಗೆ ಇಡಿಯಿಂದಾಗಿ ಇಡಿಕೆಶಿ ಎಂಬ ಕುಖ್ಯಾತಿ ಬಂತು. ಕನಕಪುರದ ಬಂಡೆಗಿಂತಲೂ ಗಟ್ಟಿಯಾಗಿದ್ದವನು ಜೈಲಿನಲ್ಲಿ ಸರಿಯಾದ ಆಹಾರ ಸಿಗದೆ ಹತ್ತಿಯಂತೆ ಮೆತ್ತಗಾದೆ. ಈ ವರ್ಷ ಹೇಗಾದರೂ ಮಾಡಿ ಕೆಪಿಸಿಸಿ ಅಧ್ಯಕ್ಷನಾಗುವ ಮೂಲಕ ಪುನಃ ತೂಕ ಹೆಚ್ಚಿಸಿಕೊಳ್ಳಬೇಕು ಅನ್ನುವುದೇ ನನ್ನ ಸಂಕಲ್ಪ. ಅಭಿಮಾನಿಗಳಿಗೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ನನ್ನ ಹೊಸ ವರ್ಷದ ಸಂದೇಶ ಇಷ್ಟೆ.

ಎಲ್ಲಾದರೂ ಇಡಿ

ಎಷ್ಟಾದರೂ ಇಡಿ

ಇ.ಡಿ. ಅಧಿಕಾರಿಗಳ ಕೈಗೆ

ಸಿಗದ ಹಾಗೆ ಇಡಿ!