ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಜು. 8ರ ವರೆಗೂ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. 
ನ್ಯೂಸ್

ದ.ಕ ಮುಂದುವರಿದ ಆರೆಂಜ್ ಅಲರ್ಟ್

Shravan Kumar Nala
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಜು. 8ರ ವರೆಗೂ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಆರೆಂಜ್ ಅಲರ್ಟ್ ಹೊರತೂ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವರೆಗೆ ಮಳೆ ಕ್ಷೀಣವಾಗಿತ್ತು. ನಂತರ ಮಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಭಾರಿ ಮಳೆ ಸುರಿದಿಲ್ಲ. ಆದರೆ ಭಾರಿ ಮಳೆಯ ಮುನ್ಸೂಚನೆ ಮೇರೆಗೆ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದರೆ ಮಧ್ಯಾಹ್ನ ವರೆಗೆ ನಿರೀಕ್ಷಿತ ಮಳೆಯಾಗದೆ ಮೋಡ ನಡುವೆ ಆಗಾಗ ತುಂತುರು ಮಳೆಯಾಗಿತ್ತು. ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಧಾರಾಕಾರ ಮಳೆ ಸುರಿದಿದೆ. ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮಧ್ಯಾಹ್ನ ವೇಳೆಗೆ ಬಿಸಿಲು, ಮೋಡದ ವಾತಾವರಣ ಕಂಡುಬಂತು.
ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 22.2 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಸುಳ್ಯದಲ್ಲಿ 42.2 ಮಿ.ಮೀ. ದಾಖಲಾಗಿದೆ. ಬೆಳ್ತಂಗಡಿ 17.4 ಮಿ.ಮೀ, ಬಂಟ್ವಾಳ 13.9 ಮಿ.ಮೀ, ಮಂಗಳೂರು 25.2 ಮಿ.ಮೀ, ಪುತ್ತೂರು 43.9 ಮಿ.ಮೀ, ಮೂಡುಬಿದಿರೆ 21.6 ಮಿ.ಮೀ, ಕಡಬ 33 ಮಿ.ಮೀ, ಮೂಲ್ಕಿ 5 ಮಿ.ಮೀ., ಉಳ್ಳಾಲದಲ್ಲಿ 13.4 ಮಿಮಿ ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 5.19 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.5 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 78.75 ಮೀ, ಗುರುಪುರ ನದಿ (ಅದ್ದೂರು) 2.24 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
* ಜುಲೈ 10ರವರೆಗೆ ಮಳೆ ಮುನ್ಸೂಚನೆ
ರಾಜ್ಯದ ಕರಾವಳಿ ಭಾಗದ ಜನತೆಗೆ ಹವಾಮಾನ ಇಲಾಖೆಯು ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದೆ. ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಟ್ಟು ಬಿಟ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣ ಇರಲಿದ್ದು, ಕೃಷಿ ಚಟುವಟಿಕೆಗಳಿಗೆ ಈ ಮಳೆ ಪೂರಕವಾಗಲಿದೆ. ಈಗಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರ ತನಕ ಇದೇ ರೀತಿಯ ಬಿಟ್ಟು ಬಿಟ್ಟು ಬರುವ ಮಳೆ ಮುಂದುವರಿಯುವ ಮುನ್ಸೂಚನೆಗಳಿವೆ. ಉಡುಪಿ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿರಲಿದೆ. ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯ ಮಧ್ಯಮ ಸ್ತರದಲ್ಲಿ ಉಂಟಾಗುತ್ತಿರುವ ಗಾಳಿಯ ತಿರುವಿಕೆ ಕಾರಣದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ.
ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನುಗಾರರು ಮತ್ತು ತಗ್ಗು ಪ್ರದೇಶದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನಿಸುವಂತೆ ಕೋರಲಾಗಿದೆ.