ನ್ಯೂಸ್

ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ ಅಕ್ರಮ ಪ್ರಕರಣ: ಬಿಜೆಪಿ ಮಾಜಿ ಶಾಸಕ ಡಿ.ಎಸ್.ವೀರಯ್ಯ ಬಂಧನ

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ 47.10 ಕೋಟಿ ರೂಪಾಯಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಈ ಹಗರಣ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್​ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈ ಹಿಂದೆ ವಾರ್ತಾ ಇಲಾಖೆಯ ಶಂಕರಪ್ಪ ಬಂಧನವಾಗಿತ್ತು, ಇದೀಗ ಮೈಸೂರಿನಲ್ಲಿ ಮುಡಾ ಅಕ್ರಮ ವಿರೋಧಿಸಿ ಶುಕ್ರವಾರ ಪ್ರತಿಭಟನೆಗೆ ತೆರಳಿದ್ದಾಗ ವೀರಯ್ಯರನ್ನು ಬಂಧಿಸಲಾಗಿದೆ.

ಡಿಡಿಯುಟಿಟಿಎಲ್​ನಲ್ಲಿ 2021ರಿಂದ 2023ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್ ಅವರು ವಿಲ್ಸನ್ ಗಾರ್ಡನ್‌ ಠಾಣೆಗೆ ದೂರು ನೀಡಿದ್ದರು.2023ರ ಸೆಪ್ಟೆಂಬರ್​ 23ರಂದು ಎಫ್​ಐಆರ್ ದಾಖಲಾಗಿತ್ತು. ಬಳಿಕ ವೀರಯ್ಯ ಅವರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಏನಿದು ಪ್ರಕರಣ: 2021ರ ಅಕ್ಟೋಬರ್ 25ರಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆದರೆ ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.