ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಿಚೌಂಗ್ ಚಂಡಮಾರುತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, 17 ಮಂದಿಯ ಪ್ರಾಣ ಕಸಿದಿದೆ. ವರುಣನ ಅಬ್ಬರದ ಭಯ ಒಂದೆಡೆಯಾದರೆ, ಮನೆಗಳಿಗೆ ನೀರು ತುಂಬಿ ಜಲಚರಗಳ ದಾಂಗುಡಿ ಇಡುತ್ತಿರುವ ಭಯ ಇನ್ನೊಂದೆಡೆಯಾಗಿದೆ. ನಿನ್ನೆ ರಾತ್ರಿ ನಡುರಸ್ತೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇದೀಗ ರಸ್ತೆಗಳಲ್ಲಿ ನೀರಿನ ಜತೆಗೆ ಮೀನುಗಳು ಸಹ ಕೊಚ್ಚಿಕೊಂಡು ಬರುತ್ತಿದ್ದು, ಜನರು ಮೀನುಗಳಿಗಾಗಿ ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈ ಮಂದಿಗೆ ಹಾವುಗಳು ಭಯವೂ ಕಾಡುತ್ತಿದೆ.
ಪ್ರವಾಹದ ನೀರಿನಲ್ಲಿ ಜನರು ಭಾರಿ ಗಾತ್ರ ಮೀನಗಳನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಮಿಳುನಾಡಿನ ಚೆನ್ನೈನಲ್ಲಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಬಳಿ ನಿರ್ಮಾಣ ಹಂತದ ಸೇತುವೆ ಬಳಿಯ ವ್ಯಕ್ತಿಯ ರಸ್ತೆಯಲ್ಲಿ ಬೃಹತ್ ಮೀನನ್ನು ಹಿಡಿದು ಖುಷಿಯಿಂದು ಹೊತ್ತೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ಮಂದಿ ಮೀನುಗಳಿಗಾಗಿ ರಸ್ತೆಗಿಳಿದು ಕೈಗೆ ಸಿಕ್ಕಷ್ಟನ್ನು ಬಾಚಿಕೊಂಡಿದ್ದಾರೆ.
ದೈತ್ಯ ಮೊಸಳೆಯೊಂದು ನಿನ್ನೆಯಷ್ಟೇ ರಸ್ತೆಯ ಮೇಲೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿ, ಜನರು ಆತಂಕಕ್ಕೆ ಒಳಗಾಗಿದ್ದರು. ಚೆನ್ನೈನ ನೆಡುಂಗುಂಡ್ರಂ ಸರೋವರದ ಬಳಿ ಈ ಘಟನೆ ವರದಿಯಾಗಿದೆ. ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ) ಸುಪ್ರಿಯಾ ಸಾಹು ಅವರು ವಿಡಿಯೋ ಶೇರ್ ಮಾಡಿಕೊಂಡು ಜನರು ಭಯಭೀತರಾಗಬೇಡಿ ಎಂದು ಮನವಿ ಮಾಡಿದರು.
ಮೊಸಳೆ ಮತ್ತು ಮೀನುಗಳು ಮಾತ್ರವಲ್ಲದೆ, ಹಾವುಗಳು ಕೂಡ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬರುತ್ತಿದ್ದು, ಸ್ಥಳೀಯ ಜನರಲ್ಲಿ ಭಯ ಉಂಟು ಮಾಡಿದೆ. ಹಾವುಗಳು ಸುರಕ್ಷಿತ ಸ್ಥಳಗಳನ್ನು ಅರಸಿ ಮನೆಗಳಿಗೆ ನುಗ್ಗಿ ಬೆಚ್ಚಿಗಿನ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಿವೆ. ಇದು ಜನರ ಭಯಕ್ಕೆ ಕಾರಣವಾಗಿದೆ.
ಡಿಸೆಂಬರ್‌ನ ಆರಂಭದಲ್ಲಿ ಮಿಚೌಂಗ್ ಚಂಡಮಾರುತ ಚೆನ್ನೈಗೆ ಅಪ್ಪಳಿಸಿತು. ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಿರುವ ಸೈಕ್ಲೋನ್ ಪರಿಣಾಮ ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಹಾಗೂ ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮರಗಳು ಧರೆಗುಳಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಮತ್ತು ರಸ್ತೆಗಳೆಲ್ಲ ನದಿಯಂತಾಗಿದ್ದು, ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್ ಮತ್ತು ನೀರಿನ ಪೂರೈಕೆ ಇಲ್ಲದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚೆನ್ನೈನಲ್ಲಿ ಭಾರೀ ಮಳೆಗೆ ಕಾರುಗಳು ಮತ್ತು ವಾಹನಗಳು ಕೊಚ್ಚಿಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ನಡುವೆ ತಮಿಳುನಾಡು ಸರ್ಕಾರ, ಮಿಚೌಂಗ್ ಚಂಡಮಾರುತದಿಂದ ಭಾರಿ ಹಾನಿಯುಂಟಾಗಿದ್ದು, 5060 ಕೋಟಿ ರೂಪಾಯಿ ಪರಿಹಾರ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. (ಏಜೆನ್ಸೀಸ್)