ನ್ಯೂಸ್

ತಮಿಳುನಾಡಿಗೆ ಅಪ್ಪಳಿಸಿದ ಮಾಂಡೌಸ್​ ಚಂಡಮಾರುತ: ರಾತ್ರಿಯಿಡೀ ಧಾರಾಕಾರ ಮಳೆ, ಭೂ ಕುಸಿತ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್​ ಚಂಡಮಾರುತವು ಶುಕ್ರವಾರ ತಡರಾತ್ರಿ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಭಾರಿ ಮಳೆಯಾಗುತ್ತಿದೆ. ಮಾಮಲಪುರಂನಲ್ಲಿ ಭೂ ಕುಸಿತ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು ಧರೆಗುರುಳಿವೆ.

ಚೈನ್ನೈನಲ್ಲಿ ಬೃಹತ್​ ಮರಗಳೂ ಧರೆಗುರುಳಿದ್ದು, ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮುಂದುವರಿದಿದೆ. ಮುಂದಿನ ಸೂಚನೆವರೆಗೆ ಎಲ್ಲ ಪಾರ್ಕ್​ ಮತ್ತು ಆಟದ ಮೈದಾನಗಳನ್ನು ಮುಚ್ಚಲು ಚೆನ್ನೈ ಮಹಾನಗರಪಾಲಿಕೆ ಆದೇಶಿಸಿದೆ. ಬೀಚ್​ಗೆ ತೆರಳದಂತೆ ಹಾಗೂ ಮರಗಳ ಕೆಳಗೆ ನಿಲ್ಲದಂತೆ, ವಾಹನಗಳನ್ನು ಮರದ ಕೆಳಗೆ ನಿಲ್ಲಿಸದಂತೆ ಸೂಚಿಸಿದೆ.

ಗುರುವಾರದಿಂದಲೇ ಸಾಧಾರಣ ಮಳೆಯಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ತಿರುವಲ್ಲೂರ್​, ಚೆಂಗಲ್ಪಟ್ಟು, ವೆಲ್ಲೂರು, ರಾಣಿಪೇಟೆ ಮತ್ತು ಕಾಂಚಿಪುರಂ ಸಹಿತ 12 ಜಿಲ್ಲೆಗಳಲ್ಲಿ ಶುಕ್ರವಾರವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನಾದ್ಯಂತ 5,093 ಪರಿಹಾರ ಕೇಂದ್ರಗಳು ಮತ್ತು 121 ಆಶ್ರಯ ತಾಣಗಳನ್ನು ತೆರೆಯಲಾಗಿದೆ. ಈ ಪೈಕಿ ಕೇಂದ್ರಾಡಳಿತ ಪ್ರದೇಶದಲ್ಲಿ 238 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 10 ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಕಾರ್ಯನಿರ್ವಹಿಸುತ್ತಿದೆ.