ಬೆಂಗಳೂರು: (Cyclone likely on the 25th) ಬಂಗಾಳಕೊಲ್ಲಿಯಲ್ಲಿ ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಇಳಿಮುಖವಾಗಿದ್ದ ಹಿಂಗಾರು ಮಳೆ,ವಾರಾಂತ್ಯಕ್ಕೆ ಬಿರುಸುಗೊಳ್ಳಲಿದೆ.
ಮೈಸೂರು, ಕೊಡಗು, ಚಾಮರಾಜನಗರದಲ್ಲಿ ಅ.23ರಿಂದ ಅ.25ರವರೆಗೆ ಹಾಗೂ ಹಾಸನದಲ್ಲಿ ಅ.23ರಿಂದ ಮುಂದಿನ 3 ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮಂಡ್ಯದಲ್ಲಿ ಅ.25, ಕೋಲಾರ ಅ.26, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಅ.21ರಂದು ಯೆಲ್ಲೋ ಅಲರ್ಟ್ ಇರಲಿದೆ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ ಮತ್ತು ತುಮಕೂರಿನಲ್ಲಿ ಮುಂದಿನ 2 ದಿನ ಸಾಧಾರಣ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
ಹಿರಿಯ ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ಮಾತನಾಡಿ,ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅ.24 ಅಥವಾ ಅ.25ಕ್ಕೆ ಸೈಕ್ಲೋನ್ ಆಗಿ ರೂಪುಗೊಳ್ಳುವ ಸಂಭವ ಇದೆ. ಆದರೆ, ಈ ಸೈಕ್ಲೋನ್ ಯಾವದತ್ತ ಸಾಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ನಿಖರವಾಗಿ ಹೇಳುವುದಕ್ಕೆ ಆಗಲ್ಲ. ಚಂಡಮಾರುತ ಉಂಟಾದ ಬಳಿಕ ಇದನ್ನು ಹೇಳಬಹುದು. ಸದ್ಯಕ್ಕೆ ಭೂಮಿಯಿಂದ ಬಹಳ ದೂರದಲ್ಲಿರುವ ಮಾರುತಗಳು, ಸಮುದ್ರದಲ್ಲೇ ಸಾಗಲಿವೆ. ಭೂಮಿಗೆ ಅಪ್ಪಳಿಸುವುದಿಲ್ಲ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಏಕಾಕಾಲದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ರಾಜ್ಯಗಳಿಗೆ ಮಳೆಯಾಗಲಿದೆ. ಆದರೆ, ಸೈಕ್ಲೋನ್ನಿಂದ ನಮ್ಮ ರಾಜ್ಯಕ್ಕೆ ಅಷ್ಟೇನೋ ಪರಿಣಾಮ ಇರುವುದಿಲ್ಲ ಎಂದರು.