ಆಂಧ್ರಕ್ಕೆ ಲಗ್ಗೆ ಇಟ್ಟ 'ಅರ್ನಾಬ್' ಚಂಡಮಾರುತ, ಭಾರಿ ಮಳೆ-ಗಾಳಿಯ ಮುನ್ಸೂಚನೆ 
ನ್ಯೂಸ್

ಆಂಧ್ರಕ್ಕೆ 'ಅರ್ನಾಬ್' ಚಂಡಮಾರುತದ ಭೀತಿ: ಬುಧವಾರ ಲ್ಯಾಂಡ್‌ಫಾಲ್ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ! | Andhra Cyclone

Cyclone Arnab: ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಭೀಕರ 'ಅರ್ನಾಬ್' ಚಂಡಮಾರುತ ಆಂಧ್ರ ಪ್ರದೇಶ ಕರಾವಳಿಯತ್ತ ಧಾವಿಸುತ್ತಿದೆ. ಬುಧವಾರ ಬೆಳಿಗ್ಗೆ ಯಾನಾಂ ಸಮೀಪದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಇದು ದಂಡೆಗೆ ಅಪ್ಪಳಿಸಲಿದೆ (ಲ್ಯಾಂಡ್‌ಫಾಲ್) ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

ಈ ವೇಳೆ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗರಿಷ್ಠ 140 ಕಿ.ಮೀ ವರೆಗೆ ತಲುಪುವ ಸಾಧ್ಯತೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರ ಪ್ರದೇಶ ಹಾಗೂ ದಕ್ಷಿಣ ಒಡಿಶಾ ಕರಾವಳಿ ಭಾಗಗಳಿಗೆ ಹವಾಮಾನ ಇಲಾಖೆಯು 'ರೆಡ್ ಅಲರ್ಟ್' ಜಾರಿ ಮಾಡಿದೆ.

ಕರಾವಳಿಗೆ ಲಗ್ಗೆ ಇಟ್ಟ ಚಂಡಮಾರುತ

ಅಕ್ಟೋಬರ್ 27ರ ಮಂಗಳವಾರ ಬೆಳಿಗ್ಗೆ 5.30ರ ವೇಳೆಗೆ ಈ ಚಂಡಮಾರುತವು ವಿಶಾಖಪಟ್ಟಣಂನಿಂದ ಆಗ್ನೇಯಕ್ಕೆ 260 ಕಿ.ಮೀ, ಕಾಕಿನಾಡದಿಂದ ಪೂರ್ವ-ಆಗ್ನೇಯಕ್ಕೆ 300 ಕಿ.ಮೀ ಮತ್ತು ಮಚಲಿಪಟ್ನಂನಿಂದ ಪೂರ್ವಕ್ಕೆ 390 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು. ಕಳೆದ ಕೆಲವು ಗಂಟೆಗಳಲ್ಲಿ ಗಂಟೆಗೆ 22 ಕಿ.ಮೀ ವೇಗದಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸಿದ್ದು, ಮುಂಬರುವ ಗಂಟೆಗಳಲ್ಲಿ ವಾಯುವ್ಯ ದಿಕ್ಕಿನತ್ತ ತಿರುಗಿ ಕರಾವಳಿಗೆ ತಲುಪಲಿದೆ.

ಭಾರಿ ಮಳೆ ಹಾಗೂ ಕಡಲಕೋಲಾಹಲ

ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಲ್ಯಾಂಡ್‌ಫಾಲ್ ಅವಧಿಯಲ್ಲಿ ಪೂರ್ವ ಗೋದಾವರಿ ಹಾಗೂ ಯಾನಾಂ ಭಾಗದ ತಗ್ಗು ಪ್ರದೇಶಗಳಿಗೆ 1 ರಿಂದ 1.5 ಮೀಟರ್‌ಗಳಷ್ಟು ಎತ್ತರದ ಸಮುದ್ರದ ಅಲೆಗಳು ನುಗ್ಗುವ ಭೀತಿಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಕರಾವಳಿ ನಿವಾಸಿಗಳು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: 'ಕಿಂಗ್' ಖಾನ್ ಹೊಸ ಅವತಾರ: ಬಾಯಲ್ಲಿ ರೋಜ್​ ಹಿಡಿದು ’ನಾನು ಕೊಲೆಗಾರನಲ್ಲ, ಪ್ರೇಮಿ’ ಎಂದ ಶಾರುಖ್! | SRK New Look

ಸಹಾಯವಾಣಿ ಸೇವೆ

ಸಾರ್ವಜನಿಕರ ತುರ್ತು ನೆರವಿಗಾಗಿ ಆಂಧ್ರ ಪ್ರದೇಶ ಸರ್ಕಾರಿ ಕಂಟ್ರೋಲ್ ರೂಂ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಚಂಡಮಾರುತದ ಸಂಕಷ್ಟದಲ್ಲಿರುವ ಸಾರ್ವಜನಿಕರು ತುರ್ತು ನೆರವಿಗೆ 112, ರಾಜ್ಯ ವಿಪತ್ತು ಕಂಟ್ರೋಲ್ ರೂಂ 1070, ವಿಪತ್ತು ನಿರ್ವಹಣಾ ಹೆಲ್ಪ್‌ಲೈನ್ 1800 425 0101 ಅಥವಾ 'ಮನಾ ಮಿತ್ರ' ವಾಟ್ಸಾಪ್ ಸೇವೆ 9552300009 ಗೆ ಸಂಪರ್ಕಿಸುವಂತೆ APSDMA ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ಮನವಿ ಮಾಡಿದ್ದಾರೆ.