ನ್ಯೂಸ್

ಬ್ರಹ್ಮಾಂಡ ಸೈಬರ್ ಫ್ರಾಡ್: ಕೋವಿಡ್ ಸೇವೆ ಹೆಸರಿನಲ್ಲಿ ನಡೆಯುತ್ತಿದೆ ಕೋಟ್ಯಂತರ ರೂ. ಲೂಟಿ

mcbhadrashetti
  • ಕೀರ್ತಿನಾರಾಯಣ ಸಿ. ಬೆಂಗಳೂರು

ಕರೊನಾ 2ನೇ ಅಲೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿಹೋಗಿರುವ ರಾಜ್ಯದ ಜನತೆಗೀಗ ಸೈಬರ್ ಕಾಟ ಹೊಸ ಸೋಂಕಾಗಿ ಕಾಡಲಾರಂಭಿಸಿದೆ. ಕರೊನಾ ಸೇವೆಯ ಹೆಸರಲ್ಲೇ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆ ಕಂಪಿಸುತ್ತಿರುವ ಸಂದರ್ಭದಲ್ಲಿ ಸೈಬರ್ ಖದೀಮರ ಈ ಹೊಸ ಆಟ ಗಾಯಕ್ಕೆ ಉಪು್ಪ ಸವರಿದಂತಾಗಿದೆ.

ಕೇಂದ್ರ ಸರ್ಕಾರ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ (ಸಿಇಆರ್​ಟಿ-ಇನ್) ಮಾಹಿತಿ ಪ್ರಕಾರ ಕೇವಲ ಡಿಜಿಟಲ್ ಬ್ಯಾಂಕಿಂಗ್​ಗೆ ಸಂಬಂಧಪಟ್ಟಂತೆ 2018, 2019 ಹಾಗೂ 2020ರಲ್ಲಿ ಕ್ರಮವಾಗಿ 1.59 ಲಕ್ಷ, 2.46 ಲಕ್ಷ ಹಾಗೂ 2.90 ಲಕ್ಷ ಸೈಬರ್ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡಲು ತೀರ್ಮಾನಿಸಿ ನೋಂದಣಿಗೆ ಅವಕಾಶ ಕೊಟ್ಟಿರುವುದು ಸೈಬರ್ ಆರೋಪಿಗಳಿಗೆ ವರದಾನವಾಗಿದೆ. ಕೋ-ವಿನ್ ವೆಬ್​ಸೈಟ್ ಹೆಸರಲ್ಲಿ ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿರುವುದಲ್ಲದೆ ಆನ್​ಲೈನ್​ನಲ್ಲಿ ಹೆಸರು ನೋಂದಣಿ ಮಾಡಿಸುವ ನೆಪದಲ್ಲಿ ಒಟಿಪಿ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳೂ ವರದಿಯಾಗಿವೆ.

ಸಾರ್ವಜನಿಕರು ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನೂ ಸೈಬರ್ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. 2021ರಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಕ್ಷೇತ್ರ, ಉತ್ಪಾದನಾ ವಲಯ ಹಾಗೂ ಸಂಶೋಧನಾ ಕ್ಷೇತ್ರಗಳ ಮೇಲೂ ಸೈಬರ್ ದಾಳಿಗೆ ಸಿದ್ಧತೆ ನಡೆದಿದೆ.

1ವರ್ಷ, 12 ಕೋಟಿ ಕೇಸ್

ಕರೊನಾ ಮೊದಲ ಅಲೆ ಬಂದಾಗ 2020ರ ಫೆಬ್ರವರಿಯಿಂದ 2021ರ ಜನವರಿವರೆಗೆ ದೇಶಾದ್ಯಂತ 120 ಮಿಲಿಯನ್ (12 ಕೋಟಿ) ಸೈಬರ್ ಕ್ರೖೆಂ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 2021ರ ಫೆ.28ರವರೆಗೆ 21,562 ಸೈಬರ್ ಅಪರಾಧ ಪ್ರಕರಣಗಳು ಸಿಇಎನ್ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿವೆ. ಕರೊನಾ 2ನೇ ಅಲೆಯಲ್ಲಿ ಸಾರ್ವಜನಿಕರ ಮೇಲಿನ ಸೈಬರ್ ಆರೋಪಿಗಳ ದಾಳಿಯ ತೀವ್ರತೆ ಇನ್ನಷ್ಟು ಭಯಂಕರವಾಗಿರಲಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

ಐಸಿಯು ಬೆಡ್, ಆಕ್ಸಿಜನ್ ಬೇಕಾ?

ಕರೊನಾದಿಂದಾಗಿ ಐಸಿಯು ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೆ ಸೋಂಕಿತರು ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಿಡಿಗೇಡಿಗಳು, ಐಸಿಯು ಬೆಡ್, ಆಕ್ಸಿಜನ್ ಮಾಹಿತಿ ಒದಗಿಸುವುದಾಗಿ ನಕಲಿ ವೆಬ್​ಸೈಟ್ ಸೃಷ್ಟಿಸಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಮೊಬೈಲ್ ನಂಬರ್ ಹರಿಬಿಡುತ್ತಿದ್ದಾರೆ. ಆ ನಂಬರ್​ಗೆ ಕರೆ ಮಾಡಿದವರಿಂದ ಅಥವಾ ವೆಬ್​ಸೈಟ್​ಗೆ ಲಾಗಿನ್ ಆಗುವವರ ವೈಯಕ್ತಿಕ ಮಾಹಿತಿ ಕದ್ದು ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕರೊನಾ ಪರೀಕ್ಷೆ, ಔಷಧ ವಿತರಣೆ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ.

ಕೋಟ್

ಕರೊನಾ ಸೇವೆಯ ಹೆಸರಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಸೈಬರ್ ಖದೀಮರು ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಡೊನೇಷನ್ ಸಂಗ್ರಹಿಸುತ್ತಿದ್ದ ನಕಲಿ ವೆಬ್​ಸೈಟ್​ಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬ್ಲಾಕ್ ಮಾಡಿಸಲಾಗಿದೆ. ಡೊನೇಷನ್ ಕೊಡುವ ಮುನ್ನ ಆ ಸಂಸ್ಥೆಯ ಹಿನ್ನೆಲೆ ತಿಳಿದುಕೊಳ್ಳಿ. ಲಸಿಕೆ, ಔಷಧ ಹೆಸರಿನಲ್ಲಿ ಕರೆ ಮಾಡುವ ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬೇಡಿ.

| ಎಂ.ಡಿ.ಶರತ್ ಎಸ್​ಪಿ, ಸಿಐಡಿ ಸೈಬರ್ ಘಟಕ

ಸುರಕ್ಷತೆ ಹೇಗೆ?

ಕರೊನಾ ಸೇವೆಯ ಯಾವುದೇ ಮಾಹಿತಿ ಬೇಕಾದರೂ ಸರ್ಕಾರಿ ಸಂಸ್ಥೆಯಿಂದಲೇ ಪಡೆಯಿರಿ

ಗೂಗಲ್ ಸರ್ಚ್​ನಲ್ಲಿ ಸಿಗುವ ವೆಬ್​ಸೈಟ್​ಗಳ ಅಸಲಿಯತ್ತು ಹಿನ್ನೆಲೆ ಏನೆಂದು ತಿಳಿದುಕೊಳ್ಳಿರಿ

ಆನ್​ಲೈನ್​ನಲ್ಲಿ ಆಕ್ಸಿಮೀಟರ್​ನಂಥ ಪರಿಕರ ಖರೀದಿಸುವಾಗ ನಿಯಮ, ರೀಫಂಡ್ ಬಗ್ಗೆ ಓದಿರಿ

ಲಸಿಕೆಗೆ ಆನ್​ಲೈನ್​ನಲ್ಲಿ ರಿಜಿಸ್ಟರ್​ಗೆ ಅವಕಾಶ ಕೊಡಲಾಗಿದೆ. ಯಾರಿಗೂ ಕರೆ ಮಾಡುವುದಿಲ್ಲ

ಔಷಧ, ಬೆಡ್, ಆಕ್ಸಿಜನ್ ಒದಗಿಸುತ್ತೇವೆಂದು ಕರೆ ಮಾಡುವವರನ್ನು ನಂಬಲೇಬೇಡಿ

ಪ್ಲೇಸ್ಟೋರ್​ನಲ್ಲಿ ಆಪ್ ಡೌನ್ ಮಾಡಿಕೊಳ್ಳುವ ಮುನ್ನ ಅದರ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಿ