ನ್ಯೂಸ್

ಸೈಬರ್​ಕ್ರೖೆಂ ಕ್ಯಾಪಿಟಲ್!; ಆನ್​ಲೈನ್ ಹೂಡಿಕೆ ಹೆಸರಲ್ಲಿ ನೂರಾರು ಕೋಟಿ ಮೋಸ

ಬೆಂಗಳೂರು: ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಉಪಾಧಿಗಳ ಜತೆಗೆ ರಾಜಧಾನಿ ಬೆಂಗಳೂರು ಸೈಬರ್ ವಂಚಕರಿಗೆ ನೆಲೆಯಾಗುತ್ತಿದೆ. ಆನ್​ಲೈನ್​ನಲ್ಲಿ ವಿವಿಧ ಆಮಿಷವೊಡ್ಡಿ ಮೋಸ ಮಾಡುವ ನೂರಾರು ವಂಚಕರಿರುವ ಕುಖ್ಯಾತಿಗೆ ಪಾತ್ರವಾಗಿರುವ ಜಾರ್ಖಂಡ್​ನ ‘ಜಮತಾರಾ’ ಪ್ರದೇಶವನ್ನು ಮೀರಿಸಿ ಇಲ್ಲಿ ಆನ್​ಲೈನ್ ವಂಚನೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ 854 ಕೋಟಿ ರೂ. ವಂಚನೆಯ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ ಬೆನ್ನಲ್ಲೇ ಸಿಬಿಐ ಪೊಲೀಸರು ನಡೆಸಿದ ತನಿಖೆಯಲ್ಲೂ ಸೈಬರ್ ವಂಚಕರು ಬೆಂಗಳೂರನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಸುಲಭವಾಗಿ ಸಾಲ ಸಿಗುತ್ತೆ, ಕೈತುಂಬಾ ವೇತನ ಬರುವ ನೌಕರಿ ಸಿಗುತ್ತೆ, ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂಬ ಅಂತಾರಾಷ್ಟ್ರೀಯ ಆನ್​ಲೈನ್ ಕಂಪನಿಗಳ ಜಾಹೀರಾತಿನ ಆಮಿಷಕ್ಕೆ ಒಳಗಾಗುವ ಮುನ್ನ ಹುಷಾರ್. ಏಕೆಂದರೆ ಆಮಿಷವೊಡ್ಡುವ ಯೋಜನೆಗಳನ್ನು (ಪೋಂಜಿ ಸ್ಕೀಮ್ ನಂಬಿ ಹಣ ಹೂಡಿಕೆ ಮಾಡಿದರೆ ಮೋಸ ಹೋಗುವುದು ನಿಶ್ಚಿತ. ಕೋಟ್ಯಂತರ ರೂ. ವಂಚನೆ ಮಾಡಿರುವ ಆರ್ಥಿಕ ಅಪರಾಧ ಪ್ರಕರಣಗಳನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದಾರೆ. ವಂಚನೆಯಿಂದ ಕಬಳಿಸಿದ ದುಡ್ಡಲ್ಲಿ ನಕಲಿ ದಾಖಲಾತಿಗಳನ್ನು ಬಳಸಿ ಚಿನ್ನ ಖರೀದಿ ಹಾಗೂ ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಮಾಡಿಕೊಂಡಿರುವುದು ದೃಢಪಟ್ಟಿದೆ.

‘ಬೆಂಗಳೂರು’ ವ್ಯಾಪಾರಿಯೊಬ್ಬ ಈ ವಂಚನೆ ಕಾರ್ಯಾಚರಣೆಯ ಕೇಂದ್ರವಾಗಿದ್ದಾನೆ. ದೇಶದಲ್ಲಿ ವಂಚನೆಯಲ್ಲಿ ತೊಡಗಿದ್ದ 137 ನಕಲಿ ಕಂಪನಿಗಳನ್ನು ಸಿಬಿಐ ಗುರುತಿಸಿದೆ. ಇದರಲ್ಲಿ ಬಹುತೇಕ ಕಂಪನಿಗಳು ಬೆಂಗಳೂರಿನಲ್ಲೇ ನೋಂದಣಿಯಾಗಿವೆ. ಅಲ್ಲದೆ, ಈ ಕಂಪನಿಗಳ ಹಲವು ನಿರ್ದೇಶಕರು ಬೆಂಗಳೂರು ಮೂಲದವರಾಗಿದ್ದಾರೆ. ಇವರೆಲ್ಲ ಬೆಂಗಳೂರಿನ ವ್ಯಾಪಾರಿಯೊಬ್ಬನ ಜತೆಗೆ ವ್ಯಾವಹಾರಿಕ ಸಂಪರ್ಕ ಹೊಂದಿರುವ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಿಗೆ ಬಂದಿದೆ. ಇದಲ್ಲದೆ ಇಡೀ ವಂಚನೆ ಕಾರ್ಯಾ ಚರಣೆಯ ಕೇಂದ್ರವಾಗಿರುವ ಈ ವ್ಯಾಪಾರಿ ಬೇರೆಬೇರೆ ಬ್ಯಾಂಕ್​ಗಳಲ್ಲಿ 16 ಖಾತೆಗಳನ್ನು ನಿರ್ವಹಿಸಿದ್ದು, ಬರೋಬ್ಬರಿ 357 ಕೋಟಿ ರೂ. ಹರಿದು ಬಂದಿದೆ.

ತನಿಖಾಧಿಕಾರಿಗಳಿಗೆ ಹಣದ ಮೂಲ ಸಿಗಬಾರದು ಎಂಬ ಕಾರಣಕ್ಕೆ 16 ಖಾತೆಗಳಲ್ಲಿದ್ದ 357 ಕೋಟಿ ರೂ. ಅನ್ನು ಮತ್ತೆ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಸಿಬಿಐ ಪರಿಶೀಲನೆಯಲ್ಲಿ ದೃಢಪಟ್ಟಿದೆ. ನಕಲಿ ಕಂಪನಿಗಳ ನಿರ್ದೇಶಕರಿಗೆ ಸೇರಿದ ಬೆಂಗಳೂರು, ಕೊಚ್ಚಿ ಮತ್ತು ಗುರುಗ್ರಾಮನ ವಿವಿಧ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ಅ.20ರಂದು ದಾಳಿ ನಡೆಸಿ ಪರಿಶೀಲಿಸಿದಾಗ ವಂಚನೆಗೆ ಸಂಬಂಧಿಸಿದಂತೆ ಮಹತ್ವದ ಪುರಾವೆಗಳು ಸಿಕ್ಕಿವೆ. ಅಲ್ಲದೆ, ವಿದೇಶಿ ಪ್ರಜೆಗಳ ಕೈವಾಡವಿರುವುದು ದೃಢಪಟ್ಟಿದೆ.

ನಕಲಿ ಕಂಪನಿಗಳ ನೋಂದಣಿ ಹಾಗೂ ನಿರ್ದೇಶಕರಿಗೆ ಸಂಬಂಧಿಸಿದ ದಾಖಲೆ ಸೃಷ್ಟಿ, ಮಾರ್ಪಡಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರವಿರುವುದು ಗೊತ್ತಾಗಿದೆ. ಇಮೇಲ್​ನಲ್ಲಿ ಮಾತುಕತೆ, ವಾಟ್ಸ್​ಆಪ್ ಚಾಟ್ಸ್, ಕೆಲ ದಾಖಲೆಪತ್ರಗಳು ಲಭ್ಯವಾಗಿದ್ದು, ಇವರಿಬ್ಬರೂ ಅವ್ಯವಹಾರ ಜಾಲದಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಿದೆ. ತನಿಖೆ ದೃಷ್ಟಿಯಿಂದ ಸಿಬಿಐ ಅಧಿಕಾರಿಗಳು ಆಪಾದಿತರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಆನ್​ಲೈನ್ ಹೂಡಿಕೆದಾರರಿಗೆ ಮೋಸ

  • ಉದ್ಯೋಗ, ಹೂಡಿಕೆ ಹೆಸರಲ್ಲಿ ಕೋಟ್ಯಂತರ ರೂ. ಮೋಸ
  • 137 ವಂಚಕ ಕಂಪನಿಗಳ ನೋಂದಣಿಗೆ ಸಿಲಿಕಾನ್​ಸಿಟಿ ನಂಟು
  • ಬೆಂಗಳೂರು ವ್ಯಾಪಾರಿ ಖಾತೆಗಳಿಗೆ 357 ಕೋಟಿ ರೂ. ಜಮೆ

ವಂಚನೆ ಹೇಗೆ?

  • ಯುಪಿಐ ಮೂಲಕ ಹಣ ಪಾವತಿ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆಂಬ ಆಮಿಷ.
  • ಜಾಲತಾಣ, ಜಾಹೀರಾತು ಪೋರ್ಟಲ್, ಎನ್ಕ್ರಿಪ್ಟೆಡ್ ಚಾಟಿಂಗ್ ಅಪ್ಲಿಕೇಷನ್, ಎಸ್ಸೆಮ್ಮೆಸ್ ಬಳಕೆ.
  • ಪೋಂಜಿ ಸ್ಕೀಂಗಳ ಮೂಲಕ ಪಾರ್ಟ್ ಟೈಂ ಜಾಬ್ ಆಮಿಷ, ಚೈನ್ ಲಿಂಕ್​ಜಾಹೀರಾತು ಕೊಟ್ಟು ಮೋಸ.
  • ಸರ್ಚ್ ಇಂಜಿನ್​ನ ಜಾಹೀರಾತು, ಬಲ್ಕ್ ಎಸ್ಸೆಮ್ಮೆಸ್ ಕಳುಹಿಸಲು ಬಾಡಿಗೆ ಹೆಡರ್​ಗಳನ್ನು ಬಳಸಿದ್ದಾರೆ.
  • ಯುಪಿಐ ಖಾತೆಗಳ ಸಂಕೀರ್ಣ ಜಾಲದ ಮೂಲಕ ಹಣ ವರ್ಗಾವಣೆ, ಚಿನ್ನ ಅಥವಾ ಕ್ರಿಪ್ಟೋ ಕರೆನ್ಸಿ ಖರೀದಿ.

ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಏಕೆ?

ವಂಚನೆಯಿಂದ ಗಳಿಸಿದ ಹಣ ಯಾವುದೇ ಬ್ಯಾಂಕ್ ಖಾತೆಗೆ ವರ್ಗಾವಣೆಯಾದರೂ ಸೈಬರ್ ಪೊಲೀಸರ ಸಹಾಯದಿಂದ ಅದನ್ನು ಪತ್ತೆಹಚ್ಚಿ, ಖಾತೆ ಫ್ರೀಜ್ ಮಾಡುವ ಮೂಲಕ ಆರೋಪಿಗಳ ಕೈ ಸೇರದಂತೆ ತಡೆಯಬಹುದು. ಈ ಕಾರಣಕ್ಕಾಗಿಯೇ ಆರೋಪಿಗಳು ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಮಾರ್ಪಾಡು ಮಾಡಿದರೆ ಪತ್ತೆಹಚ್ಚುವುದು ಕಷ್ಟ. ಅಲ್ಲದೆ, ಚಿನ್ನ ಖರೀದಿಸುವುದರಿಂದ ಅದನ್ನೂ ಪತ್ತೆಹಚ್ಚಲು ಆಗಲ್ಲ. ಇದೇ ಕಾರಣಕ್ಕಾಗಿ ಆರೋಪಿಗಳ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶಿಗರಿಗೆ ಸ್ಥಳೀಯರ ಸಾಥ್

ಆನ್​ಲೈನ್ ಇನ್ವೆಸ್ಟ್​ಮೆಂಟ್ ವಂಚನೆಯ ಹಿಂದೆ ವಿದೇಶಿಗರು ಭಾಗಿಯಾಗಿದ್ದಾರೆ. ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಿದ್ದು, ಬಂದ ಹಣ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಸ್ಥಳೀಯ ವ್ಯಕ್ತಿಗಳನ್ನು ಬಳಸಿಕೊಂಡು ವಂಚನೆ ಜಾಲ ನಡೆಸ ಲಾಗುತ್ತಿದ್ದು, ಸಿಬಿಐ ತನಿಖೆ ಮುಂದುವರಿದಿದೆ.

ಸಿಬಿಐ ಎಚ್ಚರಿಕೆ

  • ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಹಣ ಹೂಡಿಕೆ ಮಾಡಬೇಡಿ.
  • ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ, ಬಡ್ಡಿ ಎಂಬ ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳಬೇಡಿ.
  • ಯಾವುದೇ ಕಂಪನಿಯಲ್ಲಿ ಹಣ ಹೂಡಿಕೆಗೂ ಮುನ್ನ ಕಂಪನಿಯ ಹಿನ್ನೆಲೆ, ನೈಜತೆ ತಿಳಿದುಕೊಳ್ಳಿ.
  • ಚೈನ್ ಲಿಂಕ್ ವ್ಯವಹಾರ, ಪೋಂಜಿ ಸ್ಕೀಂ ನಂಬಬೇಡಿ. ಮೊದಲು ಹಣ ಕೊಟ್ಟು ಕೊನೆಗೆ ಮೋಸ.