ನ್ಯೂಸ್

ಇ- ತಂತ್ರಾಂಶಕ್ಕೆ ಸೈಬರ್ ಕಾಟ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸರ್ಕಾರದ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ತಂದಿರುವ ಇ-ಕಚೇರಿ ತಂತ್ರಾಂಶ ಪದೇಪದೆ ಸೈಬರ್ ದಾಳಿಗೆ ತುತ್ತಾಗಿ ನಿತ್ಯದ ಜನಸೇವೆಗೆ ಅಡ್ಡಿಯಾಗುತ್ತಿದೆ.

ಸರ್ಕಾರದ ವಿವಿಧ ಇಲಾಖೆಗಳ ಸಂಪೂರ್ಣ ಕಡತ ನಿರ್ವಹಣೆ ಮತ್ತು ದತ್ತಾಂಶ ಸಂಗ್ರಹವನ್ನು ಇ-ಆಫೀಸ್ ತಂತ್ರಾಂಶದಲ್ಲಿ ನಿರ್ವಹಣೆ ಮತ್ತು ಸಂಗ್ರಹ ಮಾಡಲಾಗುತ್ತಿದೆ. ಈ ಸೇವೆ ದಿನೇದಿನೆ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಸರ್ಕಾರಕ್ಕೆ ತಂತ್ರಾಂಶದ ಸುರಕ್ಷತೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೆಲ್ಲ ತಿಳಿದ ಸರ್ಕಾರ ಇ-ಕಚೇರಿ ಸ್‌ಟಾವೇರ್ ಭದ್ರತೆಯ ದೃಷ್ಟಿಯಿಂದ ಕೆಎಸ್‌ಎನ್, ರಾಷ್ಟ್ರೀಯ ಮಾಹಿತಿ ಕೇಂದ್ರ ಜಾಲ, ರಾಷ್ಟ್ರೀಯ ಜಾಲ ಜ್ಞಾನ ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳ ಮೂಲಕ ಕಾರ್ಯನಿರ್ವಹಿಸುವಂತೆ ಮಿತಿಗೊಳಿಸಿದೆ.

ಆದಾಗ್ಯೂ ಡಿಜಿಟಲ್ ಬೆದರಿಕೆಗಳು, ಸರ್ಕಾರದ ಮಹತ್ವದ ದತ್ತಾಂಶ ಕಳ್ಳತನ ಮತ್ತು ಗೌಪ್ಯತೆ, ಸಮಗ್ರತೆ ಮೇಲೆ ಹಾನಿಯಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಕಳವಳ ವ್ಯಕ್ತಪಡಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಚ್ಚರಿಸಿದೆ.

ಇಷ್ಟೆಲ್ಲ ಸೈಬರ್ ಹ್ಯಾಕರ್‌ಗಳ ಕಳ್ಳಾಟಕ್ಕೆ ಇ-ಆಫೀಸ್ ಬಳಸುವ ಅಧಿಕಾರಿ ಮತ್ತು ಸಿಬ್ಬಂದಿ ಪೈಕಿ ಕೆಲವರು ಮಾಡುವ ಲೋಪ ಮತ್ತು ಕಂಪ್ಯೂಟರ್ ಜ್ಞಾನ ಇಲ್ಲದೆ ಇರುವುದು ಪ್ರಮುಖ ಕಾರಣವಾಗಿದೆ. ಇ-ಆಫೀಸ್ ಸ್‌ಟಾವೇರ್‌ನಲ್ಲಿ ಕಚೇರಿ ಕೆಲಸ ನಿರ್ವಹಣೆ ಮಾಡಲು ಬಾರದೆ ಇದ್ದಾಗ ತನ್ನ ಕೆಳ ಹಂತದ ಅಧಿಕಾರಿ, ಸಿಬ್ಬಂದಿಗೆ ಲಾಗಿನ್ ಐಡಿ, ಪಾರ್ಸ್‌ವರ್ಡ್ ಕೊಟ್ಟು ಅವರ ಮೂಲಕ ನಿರ್ವಹಣೆ ಮಾಡಿಸುತ್ತಾರೆ. ಕೆಲವೊಂದು ಕಚೇರಿಗಳಲ್ಲಿ ಗುತ್ತಿಗೆ ನೌಕರರು ಮತ್ತು ಖಾಸಗಿ ವ್ಯಕ್ತಿಗಳೇ ನಿರ್ವಹಣೆ ಮಾಡುವ ಉದಾಹರಣೆಗಳಿವೆ.

ಕೆಲಸ ಮುಗಿದ ಮೇಲೆ ಕಂಪ್ಯೂಟರ್ ಆ್ ಮಾಡುವ ಮೊದಲು ಲಾಗಿನ್ ಐಡಿಯನ್ನು ಲಾಗ್‌ಔಟ್ ಮಾಡದೆ ಹೋಗುವುದು ಮತ್ತು ಒಂದೇ ಪಾರ್ಸ್‌ವರ್ಡನ್ನು ವರ್ಷಾನುಗಟ್ಟಲೇ ಬಳಸುವುದರಿಂದ ಸೈಬರ್ ಖದೀಮರಿಗೆ ಆಹ್ವಾನ ನೀಡುತ್ತಿದ್ದಾರೆ.

ಕಾರಣಗಳೇನು?

ಕಚೇರಿ ಕಂಪ್ಯೂಟರ್‌ನಲ್ಲೇ ಇ-ಆಫೀಸ್ ವೆಬ್‌ಸೈಟ್‌ನ್ನು ಬಳಸಬೇಕು. ಇದರಿಂದ ಸುರಕ್ಷತೆ ಹೆಚ್ಚಿಸುತ್ತದೆ. ಕೆಲವರು ಇಮೇಲ್, ಐಪಿ ವಿಳಾಸ ಮತ್ತು ಅಪ್ಲಿಕೇಷನ್‌ಗಳನ್ನು ಕೊಟ್ಟು ವೈಟ್‌ಲೀಸ್ಟ್ ಅನುಮತಿ ಪಡೆದು ಮನೆ ಮತ್ತು ಖಾಸಗಿ ಸ್ಥಳಗಳಲ್ಲಿ ಸ್ವಂತ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಇ-ಆಫೀಸ್‌ಗೆ ಲಾಗಿನ್ ಆಗುತ್ತಿದ್ದಾರೆ. ಇದರಿಂದ ಸೈಬರ್ ಹ್ಯಾಕರ್‌ಗಳು ಸುಲಭವಾಗಿ ಒಳನುಗ್ಗಿ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬೆದರಿಕೆ ಒಡ್ಡುವುದು ಮತ್ತು ದತ್ತಾಂಶವನ್ನು ಕಳವು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಆದರಿಂದ ಸೈಬರ್ ದಾಳಿಯಿಂದ ತಪ್ಪಿಸಲು ಇ-ಆಫೀಸ್ ತಂತ್ರಾಂಶಕ್ಕೆ ಮತ್ತಷ್ಟು ಭದ್ರತೆ ನೀಡಲು ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿ ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಕಟ್ಟಾಜ್ಞೆ ಮಾಡಿದೆ.

ಇತ್ತೀಚಿನ ದಾಳಿಗಳು

- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ಹ್ಯಾಕ್

- ಗ್ರಾ.ಪಂ ಇ-ಸ್ವತ್ತು ತಂತ್ರಾಂಶ ದುರ್ಬಳಕೆ ಮಾಡಿ ಇ-ಖಾತೆ ವಿತರಣೆ

- ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ ಹಣ ವಂಚನೆ

- ಪೊಲೀಸ್ ವೆಬ್‌ಸೈಟ್ ಹ್ಯಾಕ್, ಪಾಕ್ ಧ್ವಜ, ಪ್ರಚೋದನಕಾರಿ ಸಂದೇಶ

- ನ್ಯಾಯಾಲಯಗಳ ವೆಬ್‌ಸೈಟ್ ಹ್ಯಾಕ್‌ಮಾಡಿ ಅನ್ಯ ವಿಷಯ ಪೋಸ್ಟ್

ಬಳಕೆದಾರರಿಗೆ ಮಾರ್ಗಸೂಚಿ

ಇ-ಆಫೀಸ್ ನೋಡಲ್ ಅಧಿಕಾರಿ, ಬಳಕೆದಾರರಿಗೆ ಮಾರ್ಗಸೂಚಿ

ಇ-ಕಚೇರಿ ಬಳಕೆ ಬಳಿಕ ಕಡ್ಡಾಯವಾಗಿ ಲಾಗ್‌ಔಟ್ ಮಾಡಬೇಕು

ಆಗಿಂದಾಗ್ಗೆ ಇ-ಕಚೇರಿ ತಂತ್ರಾಂಶದ ಪಾಸ್‌ವರ್ಡ್ ಬದಲಿಸಿ

3ನೇ ವ್ಯಕ್ತಿಗೆ ಇ-ಕಚೇರಿ ತಂತ್ರಾಂಶದ ಪಾಸ್‌ವರ್ಡ್ ನೀಡಬಾರದು

ಪಬ್ಲಿಕ್ ನೆಟ್‌ವರ್ಕ್‌ನಲ್ಲಿ ಇ-ಕಚೇರಿ ತಂತ್ರಾಂಶ ಬಳಕೆ ನಿರ್ಬಂಧ

ಕೆಎಸ್‌ಡಬ್ಲ್ಯೂಎಎನ್ ನೆಟ್‌ವರ್ಕ್‌ನಲ್ಲಿ ಇ-ಆಫೀಸ್ ಬಳಸಬೇಕು

ವೈಟ್‌ಲೀಸ್ಟ್ ಪ್ರವೇಶಾವಕಾಶಕ್ಕಾಗಿ ಮಾಡಲಾಗುವ ಎಲ್ಲ ಐಪಿ ರದ್ದು

2 ಹಂತದ ದೃಢೀಕರಣಕ್ಕಾಗಿ ಇ-ಕಚೇರಿಯಲ್ಲಿ ಪರಿಚಯ ವ್ಯವಸ್ಥೆ

ಮೊಬೈಲ್ ನಂಬರ್ ಹಾಕಿ ಸ್ವೀಕೃತ ಒಟಿಪಿ ನಮೂದಿಸಿ ಲಾಗಿನ್