ನ್ಯೂಸ್

ಸೈಬರ್ ಕಳ್ಳರ ಪಾಲಾದ ಹಣ ಗ್ರಾಹಕರಿಗೆ ಮರೀಚಿಕೆ!: ಶೇ.75 ಜನರಿಗೆ ಕಳೆದುಕೊಂಡ ದುಡ್ಡು ಮರಳಿಲ್ಲ..

| ಜಗನ್ ರಮೇಶ್ ಬೆಂಗಳೂರು

ಆರ್ಥಿಕ ವ್ಯವಹಾರಗಳ ಡಿಜಿಟಲೀಕರಣದಿಂದ ಸರ್ಕಾರ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನವಾಗಿದೆ ಎನ್ನುವುದು ಸತ್ಯವೇ ಆದರೂ, ಜನರ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದತ್ತಾಂಶಗಳು ಸುಲಭವಾಗಿ ಸೈಬರ್ ಚೋರರ ಕೈಸೇರುತ್ತಿರುವುದರಿಂದ ಆರ್ಥಿಕ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸೈಬರ್ ಕಳ್ಳರ ಪಾಲಾದ ಹಣವು ವಂಚನೆಗೀಡಾದ ಶೇ.75 ಜನರಿಗೆ ಮತ್ತೆ ಸಿಗುತ್ತಿಲ್ಲ. ಆರ್​ಬಿಐ ಅಂಕಿ-ಅಂಶಗಳ ಪ್ರಕಾರ ದಿನಕ್ಕೆ ಸರಾಸರಿ ನೂರು ಕೋಟಿ ರೂ. ಈ ಕಳ್ಳರ ಪಾಲಾಗುತ್ತಿದೆ.

ಜನರು ವೈಯಕ್ತಿಕ ಡೇಟಾ, ಬ್ಯಾಂಕಿಂಗ್ ವಿವರ ನೀಡಿ ವಂಚನೆಗೊಳಗಾದರೆ, ಮತ್ತೆ ಕೆಲ ಸಂದರ್ಭಗಳಲ್ಲಿ ಸೈಬರ್ ವಂಚಕರು ಜನರಿಗೆ ಕರೆ ಮಾಡಿ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ, ಲಾಟರಿ, ಬಹುಮಾನಗಳ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ‘ಲೋಕಲ್ ಸರ್ಕಲ್ಸ್’ ಎಂಬ ಸಂಸ್ಥೆ ಸಮೀಕ್ಷೆಗೊಳಪಡಿಸಿರುವ ಶೇ.42 ಮಂದಿ 3 ವರ್ಷಗಳಲ್ಲಿ ಆರ್ಥಿಕ ವಂಚನೆಗೆ ಒಳಗಾಗಿದ್ದರೆ, ಅವರಲ್ಲಿ ಶೇ.74 ಮಂದಿಗೆ ಈವರೆಗೂ ಹಣ ವಾಪಸ್ ದೊರೆತಿಲ್ಲ ಎಂಬುದು ಗೊತ್ತಾಗಿದೆ.

ಸಮೀಕ್ಷೆಯಲ್ಲಿ ಮೊದಲ ಪ್ರಶ್ನೆಯಾಗಿ ‘ಕಳೆದ 3 ವರ್ಷಗಳಲ್ಲಿ ನೀವು ಅಥವಾ ನಿಮ್ಮ ಹತ್ತಿರದವರು ಯಾರಾದರೂ ಹಣಕಾಸಿನ ವಂಚನೆಗೆ ಬಲಿಯಾಗಿದ್ದಾರೆಯೇ’ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ 11,065 ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ಶೇ.38 ಮಂದಿ ಹೌದು ನಮ್ಮ ಕುಟುಂಬದಲ್ಲಿ ಕನಿಷ್ಠ ಒಬ್ಬರು ವಂಚನೆಗೊಳಗಾಗಿದ್ದಾರೆ ಎಂದು ಉತ್ತರಿಸಿದ್ದರೆ, ಶೇ.4 ಜನ ಕುಟುಂಬದ ಅನೇಕರು ಮೋಸ ಹೋಗಿದ್ದಾರೆ ಎಂದು ಹೇಳಿದ್ದಾರೆ. ಶೇ.54 ಮಂದಿ ವಂಚನೆಯ ಅನುಭವವಾಗಿಲ್ಲ ಎಂದಿದ್ದಾರೆ.

ಹಣ ಮರಳಿ ಪಡೆದವರು ಶೇ.17: ಕಳೆದ 3 ವರ್ಷಗಳಲ್ಲಿ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಆರ್ಥಿಕ ವಂಚನೆಗೊಳಗಾದ ಯಾರಾದರೂ ಹಣವನ್ನು ಮರಳಿ ಪಡೆದಿದ್ದಾರೆಯೇ ಎಂಬ ಅಂತಿಮ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. 10,995 ಪ್ರತಿಕ್ರಿಯೆಗಳು ಬಂದಿದ್ದು, ಶೇ.10 ಮಂದಿ ಹೌದು, ಸೂಕ್ತ ವೇದಿಕೆಯಲ್ಲಿ ದೂರು ಸಲ್ಲಿಸಿ ಹಣ ಮರಳಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಶೇ.7 ಜನ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕಳೆದುಕೊಂಡಿದ್ದ ಹಣ ಹಿಂಪಡೆದಿದ್ದಾರೆ. ಶೇ. 36 ಮಂದಿ ಪ್ರಕರಣವಿನ್ನೂ ಬಾಕಿ ಇರುವುದಾಗಿ ತಿಳಿಸಿದ್ದರೆ, ವಂಚನೆಗೊಳಗಾದ ಶೇ.19 ಮಂದಿ ಬೇರೆ ದಾರಿಯೇ ಕಾಣುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಶೇ.19 ಜನ ದೂರು ಸಲ್ಲಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದು, ಉಳಿದ ಶೇ.9 ಜನ ಕಳೆದುಕೊಂಡ ಹಣದ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಒಟ್ಟಾರೆ ಶೇ.74 ಮಂದಿ ಈವರೆಗೂ ಹಣವನ್ನು ಮರಳಿ ಪಡೆದಿಲ್ಲ.

ಮಾಹಿತಿ ಸಂಗ್ರಹ ಅಪಾಯ: ಕಳೆದ ಅಕ್ಟೋಬರ್​ನಲ್ಲಿ ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಶೇ.29 ನಾಗರಿಕರು ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್​ಗಳ ವಿವರಗಳನ್ನು ನಿಕಟ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡರೆ, ಶೇ.4 ಜನರು ಮನೆ ಮತ್ತು ಕಚೇರಿ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಶೇ.33 ಜನರು ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತವುಗಳ ಪಾಸ್​ವರ್ಡ್, ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ಇಮೇಲ್ ಅಥವಾ ಕಂಪ್ಯೂಟರ್​ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರೆ, ಶೇ.11 ಮಂದಿ ಈ ಎಲ್ಲ ವಿವರಗಳನ್ನು ತಮ್ಮ ಮೊಬೈಲ್​ನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಇದು ಸುಲಭವಾಗಿ ವಂಚಕರು ಅಥವಾ ಹ್ಯಾಕರ್​ಗಳ ಕೈಗೆ ಸಿಕ್ಕು ಮೋಸ ಹೋಗುತ್ತಾರೆ.

60,414 ಕೋಟಿ ರೂ. ಮೋಸ: ಆರ್​ಬಿಐ ವರದಿ ಪ್ರಕಾರ 2021-22ರಲ್ಲಿ 60,414 ಕೋಟಿ ರೂ.ಗಳಷ್ಟು ಸೈಬರ್ ವಂಚನೆ ನಡೆದಿದೆ. ಒಟ್ಟಾರೆಯಾಗಿ ಬ್ಯಾಂಕಿಂಗ್ ವಂಚನೆಗಳಿಂದ ಕಳೆದ 7 ವರ್ಷಗಳಲ್ಲಿ ಭಾರತ ಪ್ರತಿದಿನ ಕನಿಷ್ಠ 100 ಕೋಟಿ ರೂ. ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ. ಮೈಕ್ರೋಸಾಫ್ಟ್ 2021 ಗ್ಲೋಬಲ್ ಟೆಕ್ ಸಪೋರ್ಟ್ ಸ್ಕಾ್ಯಮ್ ರಿಸರ್ಚ್ ವರದಿಯ ಪ್ರಕಾರ, 2021ರಲ್ಲಿ ಭಾರತದ ಗ್ರಾಹಕರಿಗೆ ಶೇ.69 ಆನ್​ಲೈನ್ ವಂಚನೆಯ ಅನುಭವವಾಗಿದೆ.

ವಂಚನೆಗೊಳಗಾದರೆ ಏನು ಮಾಡಬೇಕು?: ಸೈಬರ್ ಕಳ್ಳರಿಂದ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದರೆ ಕೈತಪ್ಪಿದ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ. ಬೆಂಗಳೂರು ನಗರ ಪೊಲೀಸ್ ವಿಭಾಗದ ಕಮಾಂಡ್ ಸೆಂಟರ್​ನಲ್ಲಿ ‘ಸೈಬರ್ ಕ್ರೖೆಂ ಘಟನೆ ವರದಿ’ (ಸಿಐಆರ್) ಎಂಬ ವಿಶೇಷ ತಂಡ ರಚನೆ ಮಾಡಲಾಗಿದೆ. ದಿನದ 24 ಗಂಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್ ಕಳ್ಳರಿಂದ ವಂಚನೆಗೆ ಒಳಗಾದವರು 112 ಅಥವಾ ನಮ್ಮ100ಗೆ ಕರೆ ಮಾಡಿ ಅವರು ಕೇಳುವ ಸರಳ ಮಾಹಿತಿ ಮತ್ತು ದಾಖಲೆ ಒದಗಿಸಿದರೆ ಕಳ್ಳರ ಬ್ಯಾಂಕ್ ಖಾತೆ ಬ್ಲಾಕ್ ಮಾಡಿಸುತ್ತಾರೆ. ಆನಂತರ ದೂರು ದಾಖಲಿಸಿ ಕೋರ್ಟ್ ಮೂಲಕ ಹಣ ವಾಪಸ್ ಪಡೆಯಬಹುದು.

ಇ-ಕಾಮರ್ಸ್​ನಿಂದಲೇ ಹೆಚ್ಚು ವಂಚನೆ: ಕಳೆದ 3 ವರ್ಷಗಳಲ್ಲಿ ಅನುಭವಿಸಿರುವ ಹಣಕಾಸಿನ ವಂಚನೆಯ ಸ್ವರೂಪ ಯಾವುದು ಎಂಬ ಎರಡನೇ ಪ್ರಶ್ನೆಗೆ 9,936 ಪ್ರತಿಕ್ರಿಯೆಗಳು ಬಂದಿದ್ದು, ಶೇ.29 ಮಂದಿ ಬ್ಯಾಂಕ್ ಖಾತೆ ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದಾರೆ. ಇ-ಕಾಮರ್ಸ್ ಸೈಟ್​ಗಳಿಂದ ಶೇ.24 ಮಂದಿ ಮೋಸ ಹೋಗಿದ್ದರೆ, ಶೇ.18 ಮಂದಿ ಕ್ರೆಡಿಟ್/ಡೆಬಿಟ್ ಕಾರ್ಡ್ ವಂಚನೆ, ಶೇ.12ಮಂದಿ ಮೊಬೈಲ್ ಅಪ್ಲಿಕೇಷನ್​ಗಳಿಂದ ವಂಚನೆಗೊಳಗಾಗಿದ್ದಾರೆ. ಶೇ.8 ಮಂದಿ ಎಟಿಎಂ ಕಾರ್ಡ್ ಹಾಗೂ ಶೇ.6 ಮಂದಿ ವಿಮೆ ವಂಚನೆ ಅನುಭವಿಸಿದ್ದಾರೆ.