ನ್ಯೂಸ್

ಕರೊನಾ ಲಸಿಕೆ ಹೆಸರಲ್ಲಿ ಸೈಬರ್ ಕಳ್ಳರ ವಂಚನೆ! ಆಧಾರ್ ಸಂಖ್ಯೆ, ಒಟಿಪಿ ಪಡೆದು ಬ್ಯಾಂಕ್ ಖಾತೆಗೆ ಕನ್ನ

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ಕರೊನಾ ಲಸಿಕೆಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕಳ್ಳರು ವಂಚನೆಗೆ ಹೊಂಚು ಹಾಕಿ ಕುಳಿತಿದ್ದಾರೆ. ಅಪರಿಚಿತರಿಗೆ ಕರೆ ಮಾಡಿ, ‘ನಿಮ್ಮ ಮನೆಗೇ ಬಂದು ಲಸಿಕೆ ಹಾಕುತ್ತೇವೆ’ ಎಂದು ನಂಬಿಸಿ ಆಧಾರ್ ಸಂಖ್ಯೆ, ಒಟಿಪಿ ಪಡೆದು ಲಕ್ಷ ಲಕ್ಷ ರೂ. ಎಗರಿಸುವ ಸೈಬರ್ ಕಳ್ಳರ ಜಾಲವೊಂದು ಈಗ ಸಕ್ರಿಯವಾಗಿದೆ.

ವಂಚಕರು ಹೇಗೋ ಜನರ ಮೊಬೈಲ್​ಫೋನ್ ನಂಬರ್​ಗಳನ್ನು ಸಂಗ್ರಹಿಸಿ ಕರೆ ಮಾಡುತ್ತಾರೆ. ‘ನೀವು ಲಸಿಕೆ ತೆಗೆದುಕೊಂಡಿದ್ದೀರಾ ? ನಿಮ್ಮ ಮನೆಯಲ್ಲಿ ಯಾರಾದರೂ ತೆಗೆದುಕೊಳ್ಳುವವರಿದ್ದಾರಾ ? ಹೊರಗಡೆ ಲಸಿಕಾ ಕೇಂದ್ರದಲ್ಲಿ ತೆಗೆದು ಕೊಳ್ಳುತ್ತೀರಾ ಅಥವಾ ಮನೆಯಲ್ಲೇ ಲಸಿಕೆ ಹಾಕಿಸುತ್ತೀರಾ’ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ. ಇದಕ್ಕೇ ನಾದರೂ ನೀವು ಸ್ಪಂದಿಸಿದರೆ ಮುಗಿಯಿತು.

‘ಲಸಿಕೆಗಾಗಿ ಹೆಸರು ನೋಂದಾಯಿಸಬೇಕಿದೆ’ ಎಂದು ನಂಬಿಸಿ ಆಧಾರ್ ಕಾರ್ಡ್ ನಂಬರ್ ಪಡೆಯುತ್ತಾರೆ. ನಂತರ ನಿಮ್ಮ ಮೊಬೈಲ್​ಗೆ ಬಂದಿರುವ ಒಟಿಪಿ ಪಡೆಯುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ, ಆ ಖಾತೆಯಲ್ಲಿರುವ ಎಲ್ಲ ಹಣವನ್ನು ಆನ್​ಲೈನ್ ಆಪ್​ಗಳ ಮೂಲಕ ಸಲೀಸಾಗಿ ದೋಚುತ್ತಾರೆ. ಈಗಾಗಲೇ ಮುಂಬೈ, ಲಕ್ನೋದಲ್ಲಿ ಸಾಕಷ್ಟು ಜನ ಮೋಸ ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಂಚಕರು ವೃದ್ಧರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗೆ ಅಪರಿಚಿತರು ಯಾರಾದರೂ ಕರೆ ಮಾಡಿ ಲಸಿಕೆ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡಬೇಡಿ, ಹುಷಾರಾಗಿರಿ. ನಾವು ಈಗಾಗಲೇ ನೋಂದಣಿ ಮಾಡಿಸಿದ್ದೇವೆ ಎಂದು ಹೇಳಿ. ಸಂಶಯ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸೈಬರ್ ಕ್ರೖೆಂ ಪೊಲೀಸರು ಜಾಗೃತಿ ಮೂಡಿಸುತ್ತಿರುವ ಸಂದೇಶದ ಆಡಿಯೋ ಈಗ ವೈರಲ್ ಆಗುತ್ತಿದೆ.

- ಆಕ್ಸಿಜನ್, ಶುಗರ್ ಟೆಸ್ಟ್ ಆಪ್ ಮೂಲಕ ದಂಧೆ

ಆಕ್ಸಿಜನ್, ಬಿಪಿ, ಶುಗರ್ ಪರೀಕ್ಷೆ ಮಾಡುವ ಆಪ್​ಗಳ ಕುರಿತ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ವಂಚಕರು ನೀಡುತ್ತಾರೆ. ಈ ಆಪ್ ಡೌನ್​ಲೋಡ್ ಮಾಡಿಕೊಂಡು ಬಳಸಲು ಮುಂದಾದರೆ, ಅದರಲ್ಲಿ ಹೆಬ್ಬೆರಳು ಒತ್ತುವ ಅವಕಾಶ ಇಟ್ಟಿರುತ್ತಾರೆ. ಇದರಿಂದ ಹೆಬ್ಬೆರಳ ಗುರುತು ಕದ್ದು ಆಧಾರ್ ಲಿಂಕ್​ಗೆ ನೀಡಿರುವ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚಿಸುತ್ತಾರೆ.

- ಜಾರ್ಖಂಡ್ ಜಾಲ ಸಕ್ರಿಯ ?

ಲಸಿಕೆ ಹಾಕುತ್ತೇವೆ ಎಂದು ಕರೆ ಮಾಡುವ ಜಾರ್ಖಂಡ್ ಮೂಲದ ಜಾಲವೊಂದು ಸಕ್ರಿಯವಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆಧಾರ್ ಸಂಖ್ಯೆ, ಒಟಿಪಿ ಪಡೆದು ವಂಚಿಸುತ್ತಾರೆ. ಹಾಗಾಗಿ, ಇಂತಹ ಕರೆಗಳಿಂದ ಎಚ್ಚರದಿಂದ ಇರಬೇಕು ಎಂದು ಸೈಬರ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ರಕ್ಷಣೆ ಹೇಗೆ ?

= ಅಪರಿಚಿತರಿಗೆ ಯಾವುದೇ ಖಾಸಗಿ ಮಾಹಿತಿ ನೀಡಬೇಡಿ

= ಲಸಿಕೆ ಪಡೆಯಲು ಸರ್ಕಾರದ ವೆಬ್​ಸೈಟ್ ಮಾತ್ರ ಬಳಸಿ

= ಗೂಗಲ್​ನಲ್ಲಿ ಸಿಗುವ ಮಾಹಿತಿಯನ್ನು ಪರಿಶೀಲಿಸಿ

= ಅನಗತ್ಯವಾಗಿ ಅಸುರಕ್ಷಿತ ಆಪ್ ಡೌನ್​ಲೋಡ್ ಮಾಡದಿರಿ

= ಅಧಿಕೃತ ಸರ್ಕಾರಿ ವೆಬ್​ಸೈಟ್, ದೂರವಾಣಿ ಮೂಲಕ ಹೆಚ್ಚಿನ ಮಾಹಿತಿ ಪಡೆಯಿರಿ

ವ್ಯಾಕ್ಸಿನ್ ಕೊಡಿಸು ವುದಾಗಿ ವಂಚಿಸಿರುವ ಪ್ರಕರಣಗಳು ಬೇರೆಡೆ ವರದಿಯಾಗಿವೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಈವರೆಗೆ ಇಂತಹ ಯಾವುದೇ ದೂರು ಬಂದಿಲ್ಲ. ಈ ರೀತಿ ವಂಚಿಸುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು. ಯಾರೊಂದಿಗೂ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಮತ್ತಿತರ ಖಾಸಗಿ ಮಾಹಿತಿ ಹಂಚಿಕೊಳ್ಳಬಾರದು.

| ಕೆ. ರಾಮರಾಜನ್ ಡಿಸಿಪಿ (ಕಾನೂನು ಸುವ್ಯವಸ್ಥೆ)

*ಕರೊನಾ ಔಷಧ ನೆಪದಲ್ಲಿ ಧೋಖಾ*

ಬೆಂಗಳೂರು: ಕರೊನಾ ಸೋಂಕಿಗೆ ರೆಮ್ೆಸಿವಿರ್ ಮತ್ತು ಇತರ ಔಷಧ ಕೊಡುವುದಾಗಿ ವಾಟ್ಸ್​ಆಪ್ ಸಂದೇಶ ಕಳುಹಿಸಿ ಜನರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನೈಜೀರಿಯಾ ಪ್ರಜೆ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನಿವಾಸಿ ನೈಜೀರಿಯಾ ಮೂಲದ ಅಳದೆ ಅಬ್ದುಲ್ಲಾ ಯೂಸುಫ್ (26) ಮತ್ತು ವಿದ್ಯಾರಣ್ಯಪುರದ ಮಹಮ್ಮದ್ ಇಸ್ಮಾಯಿಲ್ ಖಾದ್ರಿ (43) ಬಂಧಿತರು. ಇವರ ಬಂಧನದಿಂದ ಬೀದರ್ ಮತ್ತು ಬೆಂಗಳೂರು ನಗರದಲ್ಲಿ ದಾಖಲಾಗಿದ್ದ 4 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಮೊಬೈಲ್ ಸಿಮ್ ಕಾರ್ಡ್ ಮಾರಾಟಗಾರ ಮಹಮ್ಮದ್ ಬಳಿಗೆ ಸಿಮ್ ಖರೀದಿಗೆ ಅಳದೆ ಅಬ್ದುಲ್ಲಾ ಬಂದು ಸ್ನೇಹ ಬೆಳೆಸಿದ್ದ. ಕರೊನಾ ಕರ್ಫ್ಯೂ, ಸೋಂಕು ಆವರಿಸಿದಾಗ ಅಬ್ದುಲ್ಲಾ ಆನ್​ಲೈನ್ ವಂಚನೆಗೆ ಸಂಚು ರೂಪಿಸಿದ್ದ. ಸಿಮ್ ಕಾರ್ಡ್ ಮತ್ತು 1 ಬ್ಯಾಂಕ್ ಖಾತೆಗೆ 10 ಸಾವಿರ ರೂ. ಪಡೆದು ಮಹಮ್ಮದ್ ಬಳಿ ನೈಜೀರಿಯಾ ಪ್ರಜೆ ಪಡೆದಿದ್ದ.

ಕರೊನಾ ಚಿಕಿತ್ಸೆಗೆ ಬಳಸುತ್ತಿರುವ ರೆಮ್ೆಸಿವಿರ್ ಮತ್ತು ಇನ್ನಿತರ ಔಷಧಗಳನ್ನು ಆನ್​ಲೈನ್​ನಲ್ಲಿ ಸರಬರಾಜು ಮಾಡುವುದಾಗಿ ವಾಟ್ಸ್ ಆಪ್​ನಲ್ಲಿ ಸಂದೇಶಗಳನ್ನು ಫಾರ್ವಡ್ ಮಾಡಿದ್ದ. ಸಂಕಷ್ಟದಲ್ಲಿದ್ದ ಜನರು ಪೋಸ್ಟ್ ನೋಡಿ ಅದರಲ್ಲಿನ ಮೊಬೈಲ್ ನಂಬರ್​ಗೆ ಕರೆ ಮಾಡಿದಾಗ ಆರ್ಡರ್ ಪಡೆಯುತ್ತಿದ್ದ. ನಂತರ ಮುಂಗಡ ಹಣ ಪಾವತಿ ಮಾಡಬೇಕೆಂದು ಆನ್​ಲೈನ್​ನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ.

ವಿಲ್ಸನ್ ಗಾರ್ಡನ್​ನ ರಾಜ್ ಅಗರವಾಲ್ ಎಂಬುವರು ಆನ್​ಲೈನ್​ನಲ್ಲಿ ಹುಡುಕಾಟ ನಡೆಸಿ ಕರೊನಾ ಔಷಧ ಬುಕ್ ಮಾಡಿದ್ದರು. ಆಗ ಆರೋಪಿಗಳು 36 ಸಾವಿರ ರೂ. ಪಡೆದು ವಂಚನೆ ಮಾಡಿದ್ದರು. ವಿಲ್ಸನ್ ಗಾರ್ಡನ್​ನ ಮುಜಾಹಿದ್ ಅಹ್ಮದ್ ಎಂಬುವರಿಗೆ ಆಸ್ಪತ್ರೆಗೆ ಔಷಧ ಕಳುಹಿಸುವುದಾಗಿ ಹೇಳಿ 85 ಸಾವಿರ ರೂ. ಪಡೆದು ಅಬ್ದುಲ್ಲಾ ಮೋಸ ಮಾಡಿದ್ದ. ಬೀದರ್​ನ ಡಾ.ಚಂದ್ರಪ್ರಕಾಶ್,

ವಾಟ್ಸ್​ಆಪ್ ಸಂದೇಶದಲ್ಲಿದ್ದ ಎಚ್​ಎಲ್​ಎಲ್ ಲೈಫ್​ಕೇರ್ ಲಿ. ಎಂಬ ಕಂಪನಿಯಲ್ಲಿ ಇಂಜೆಕ್ಷನ್ ಬುಕ್ ಮಾಡಿದ್ದರು. ಅವರಿಂದ 85 ಸಾವಿರ ರೂ. ಪಡೆದು ವಂಚಕರು ಮೋಸ ಮಾಡಿದ್ದರು. ಇದೇ ರೀತಿ ಮಾರತ್​ಹಳ್ಳಿಯ ಕೃಷ್ಣನ್ ಕುಮಾರ್ ಎಂಬುವರಿಂದ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

110 ಸಿಮ್ ಕಾರ್ಡ್ ಜಪ್ತಿ

ಬಂಧಿತರಿಂದ 4 ಮೊಬೈಲ್, 1 ಹಾರ್ಡ್​ಡಿಸ್ಕ್, 110 ವಿವಿಧ ಕಂಪನಿಯ ಸಿಮ್ ಕಾರ್ಡ್, 10 ಬ್ಯಾಂಕ್ ಖಾತೆಗಳಲ್ಲಿ 4 ಲಕ್ಷ ರೂ.ಜಪ್ತಿ ಮಾಡಲಾಗಿದೆ. ಇದೇ ರೀತಿ ಆರೋಪಿಗಳು ವಂಚನೆ ಮಾಡಿರುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.