ಬೆಂಗಳೂರು: ನಗರದ ಡೀಮ್ಡ್-ಟು ಬಿ ವಿಶ್ವವಿದ್ಯಾಲಯ ಅಧ್ಯಕ್ಷರ ಹೆಸರಿನಲ್ಲಿ ವಂಚನೆ ಮಾಡಿದ್ದ ‘ಬಾಸ್ ಸ್ಕಾೃಮ್’ ಜಾಲವನ್ನು ಪತ್ತೆ ಮಾಡಿರುವ ಸೈಬರ್ ಕಮಾಂಡ್ ಅಧಿಕಾರಿಗಳು ಹೊರ ರಾಜ್ಯದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿವಿ ಪುರಂ ರಸ್ತೆಯಲ್ಲಿರುವ ಜೈನ್ ವಿಶ್ವವಿದ್ಯಾಲಯದ ಜಂಟಿ ನಿಂಬಂಧಕ ಎಂ.ಎಸ್.ಸಂತೋಷ್ ಎಂಬುವರು ನೀಡಿದ ದೂರಿನ ಮೇರೆಗೆ ಕೆ.ಆರ್.ಪುರ ನಿವಾಸಿ ಅಣ್ಣಯ್ಯ(25), ಕಲಬುರಗಿ ಅಂಬಯ್ಯ (39), ಆಂಧ್ರ ಪ್ರದೇಶದ ಬುಸ್ಪಳ್ಳಿ ರವಿಕುಮಾರ್ ರೆಡ್ಡಿ (26), ಹೈದರಬಾದ್ ಮೂಲದ ಸೈಯದ್ ವಜಿಹುದ್ದೀನ್ ಖಾದ್ರಿ(25)ಬಂಧಿತರು. ಆರೋಪಿಗಳಿಂದ 8.50 ಲಕ್ಷ ನಗದು ಹಾಗೂ ನಾಲ್ಕು ಮೊಬೈಲ್ ವಶಕ್ಕೆ ಪಡೆದಿರುವ ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸನ್ನಿ ಅಲಿಯಾಸ್ ಡೇವಿಡ್ ಎಂಬಾತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೇಗೆಲ್ಲ ವಂಚನೆ ಮಾಡುತ್ತಿದ್ದರು:
ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಚೆನ್ ರಾಜ್ ರಾಯಚಂದ್ ಅವರ ಭಾವಚಿತ್ರ ಹಾಗೂ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸ್‌ಪ್ ಪ್ರೊಫೈಲ್ ರಚನೆ ಮಾಡಿದ್ದ ವಂಚಕರು. ಸೆ.8ರಂದು ಅಧ್ಯಕ್ಷರ ಸೋಗಿನಲ್ಲಿ ವಿಶ್ವವಿದ್ಯಾಲಯದ ಅಕೌಂಟೆಂಟ್ ವಿನಯ್ ಭೂಷಣ್ ಎಂಬುವರಿಗೆ ವಿವಿ ಬ್ಯಾಂಕ್ ಖಾತೆಯಲ್ಲಿರುವ ಬಾಕಿ ಹಣ ಬಗ್ಗೆ ವಾಟ್ಸಾಪ್ ಸಂದೇಶ ಕಳುಹಿಸಿ ವಿಚಾರಿಸಿದ್ದಾರೆ. ನಂತರ ಅದರಲ್ಲಿ 1.40 ಕೋಟಿ ರೂ.ವರ್ಗಾಯಿಸುವಂತೆ ಹೇಳಿದ್ದಾರೆ.
ಅಧ್ಯಕ್ಷರೆ ಈ ಸಂದೇಶ ಕಳುಹಿಸಿದ್ದಾರೆ ಎಂದು ನಂಬಿದ ಅಕೌಂಟೆಂಟ್ ವಿನಯ್ 1.40 ಕೋಟಿ ರೂ.ಹಣ ವರ್ಗಾಯಿಸಿದ್ದರು. ಈ ಕುರಿತು ನಗರದ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆ ಕೈಗೊಂಡ ಸೈಬರ್ ಕಮಾಂಡ್ ಅಧಿಕಾರಿಗಳ ತಂಡ, ತಾಂತ್ರಿಕ ಸಹಾಯದೊಂದಿಗೆ ವಂಚಕರು ಕಳುಹಿಸಿದ್ದ ಜಿಪ್‌ಫೈಲ್ ಅನ್ನು ತೆರೆದು ತನಿಖೆ ನಡೆಸಿದಾಗ ಗೂಗಲ್ ಕ್ರೋಮ್ ಮೂಲಕ ಅಧ್ಯಕ್ಷರ ವಾಟ್ಸ್‌ಪ್ ಲಾಗಿನ್ ಆಗಿದ್ದರು. ಸಿಬ್ಬಂದಿ ಗಮನಕ್ಕೆ ಬರದೇ ದತ್ತಾಂಶ ಕದ್ದು ಸುಮಾರು 15-20 ದಿನಗಳ ಕಾಲ ವಿವಿಯ ಹಣಕಾಸು ವಹಿವಾಟಿನ ಮೇಲೆ ನಿಗಾ ಇಟ್ಟಿದ್ದರು. ಅಧ್ಯಕ್ಷರ ಹೆಸರಿನಲ್ಲಿ ವಿದೇಶಿ ಐಪಿ ವಿಳಾಸದ ಮೂಲಕ 1.40 ಕೋಟಿ ಹಣವನ್ನು ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು.
ಕೆ.ಆರ್.ಪುರ ನಿವಾಸಿ ಅಣ್ಣಯ್ಯನಿಗೆ ಅಂಬರಾಯ ಪರಿಚಿತನಾಗಿದ್ದ. ತಲೆ ಮರೆಸಿಕೊಂಡಿರುವ ಸನ್ನಿ ಎಂಬುವರ ಸಂಪರ್ಕಕ್ಕೆ ಅಣ್ಣಯ್ಯ ಬಂದಿದ್ದ. ಬ್ಯಾಂಕ್ ಖಾತೆಗಳನ್ನು ನೀಡಿದರೆ ಹಣ ನೀಡುವುದಾಗಿ ತಿಳಿಸಿದ್ದ. ಹಣದಾಸೆಗಾಗಿ ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸುತ್ತಿದ ಅಣ್ಣಯ್ಯ ನಂತರ ಸನ್ನಿಗೆ ನೀಡುತ್ತಿದ್ದ. ಸಾರ್ವಜನಿಕರಿಗೆ ಒಂದು ಖಾತೆಗೆ 10 ಸಾವಿರ ಹಣ ನೀಡುತ್ತಿದ್ದ. ಪರಿಚಯಸ್ಥನಾಗಿದ್ದ ಆರೋಪಿ ಅಂಬರಾಯ ಖಾತೆಯನ್ನು ಸೈಬರ್ ವಂಚಕ ಸನ್ನಿಗೆ ನೀಡಿದ್ದ. ಆರೋಪಿ ಸನ್ನಿ ಅಣತಿಯಂತೆ ಬಂಧಿತರನ್ನು ಹೈದರಾಬಾದ್‌ಗೆ ಕರೆಯಿಸಿಕೊಂಡು ಹಣಕಾಸು ವಹಿವಾಟಿನ ಬಗ್ಗೆ ಮಾತುಕತೆ ನಡೆಸುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧೆಡೆ 22 ಸೈಬರ್ ವಂಚನೆ ಪ್ರಕರಣಗಳಲ್ಲಿ ಹಾಗೂ 62ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಘಟಕದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಸೆನ್ ಠಾಣೆ ಎಸಿಪಿ ಎಲ್. ನವೀನ್ ಕುಮಾರ್, ಇನ್‌ಸ್ಪೆಕ್ಟರ್ ಸಿದ್ದಪ್ಪ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.