ನ್ಯೂಸ್

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ವಿಚಾರ: ಸಿಎಂ ಪ್ರತಿಕ್ರಿಯೆ ಇದು..

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ ನಡೆಸಿದ್ದರೂ, ತಮಿಳುನಾಡಿಗೆ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ.

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಸಿಡಬ್ಲ್ಯುಆರ್​​ಸಿ ಮುಂದಿನ 18 ದಿನ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಸೂಚಿಸಿದೆ. ಈ ಬಗ್ಗೆ ಇನ್ನೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಚರ್ಚೆ ಬಳಿಕ ಸರ್ಕಾರದ ನಿರ್ಧಾರ ತಿಳಿಸುತ್ತೇವೆ ಎಂದರು.

ಅಲ್ಲದೆ, ನಮಗೆ ಈ ವಿಚಾರವಾಗಿ ಇನ್ನೂ ಸೆ.27ರ ವರೆಗೆ ಕಾಲಾವಕಾಶವಿದೆ. ಆದೇಶ ಇರುವುದು ಸೆ.28ರಿಂದ 18 ದಿನ ಅಂತ. ಹೀಗಾಗಿ ನಮ್ಮ ತೀರ್ಮಾನ ತೆಗೆದುಕೊಳ್ಳಲು ಇನ್ನೂ ಸಮಯ ಇದೆ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ಕಾವೇರಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದ ಅವರು, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.