Dr K Sudhakar, Medical Education Minister addressing press regarding Arogya Sethu App and Covid-19 lockdown, Coronavirus at Vidhana Soudha in Bengaluru on Thursday, 21 May 2020. Photo by S K Dinesh 
ನ್ಯೂಸ್

ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್​ ಕೆಂಡಾಮಂಡಲ

ಬೆಂಗಳೂರು: ಜನ ರಸ್ತೆ ಮೇಲೆ ಸಾಯ್ತಿದ್ದಾರೆ, ನಿಮಗೆ ಜ್ಞಾನ ಇದ್ಯಾ? ಹುಡುಗಾಟಿಕೆ ಹಚ್ಚಿದ್ದೀರಾ?...

ಇದು ಇಂದಿರಾನಗರದ ಸಿ.ವಿ. ರಾಮನ್​ ಸಾರ್ವಜನಿಕ ಆಸ್ಪತ್ರೆಗೆ ಇಂದು(ಗುರುವಾರ) ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​, ಆಸ್ಪತ್ರೆ ಅವ್ಯವಸ್ಥೆ ಕಂಡು ಕಿಡಿಕಾರಿದ ಪರಿ. 4 ತಿಂಗಳಿಂದ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಆದರೂ ನಮ್ಮ ವಿರುದ್ಧ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಅದಕ್ಕೆ ಇಂತಹ ಲೋಪಗಳೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿವಿ ರಾಮನ್​ ಆಸ್ಪತ್ರೆಯಲ್ಲಿ ಹೈಪ್ರೋ ಆಕ್ಸಿಜನ್​ ಹೊಂದಿರುವ 15 ಹಾಸಿಗೆಗಳ ಪೈಕಿ ಕೇವಲ ಇಬ್ಬರು ರೋಗಿಗಳನ್ನು ದಾಖಲಿಸಿಕೊಂಡು, ಉಳಿದವುಗಳನ್ನು ಖಾಲಿ ಬಿಡಲಾಗಿತ್ತು. ಅಲ್ಲದೆ ಲಘು ಹಾಗೂ ಮಧ್ಯಮ ರೋಗ ಲಕ್ಷಣ ಉಳ್ಳವರನ್ನು ದಾಖಲಿಸಿಕೊಂಡಿದ್ದರು. ಸರ್ಕಾರದ ಮಾರ್ಗಸೂಚಿಯಂತೆ ಇಂತಹ ಲಕ್ಷಣವುಳ್ಳವರನ್ನು ಕರೊನಾ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಗಂಟಲು ಮಾದರಿ ಸಂಗ್ರಹವೂ ಕಡಿಮೆ ಪ್ರಮಾಣದಲ್ಲಿತ್ತು. ಐಸಿಯು ಹಾಗೂ ವೆಂಟಿಲೇಟರ್​ ಅವಳಡಿಕೆಯಲ್ಲೂ ವಿಳಂಬವಾಗಿದೆ. ಈ ರೀತಿಯ ಪ್ರಮುಖ ಲೋಪದೋಷಗಳನ್ನು ಕಂಡ ಸಚಿವ ಸುಧಾಕರ್​ ಕಿಡಿಕಿಡಿಯಾದರು. ಮೊಬೈಲ್​ ಮೂಲಕ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಗಮನಸೆಳೆದರು.

ದಿನಕ್ಕೆ ಕನಿಷ್ಠ 500 ಗಂಟಲು ದ್ರವದ ಮಾದರಿ ಸಂಗ್ರಹಿಸಲೇಬೇಕು. ವೆಂಟಿಲೇಟರ್​ ಇಲ್ಲದಿರುವಾಗ ಅನೆಸ್ತೇಷಿಯಾ ವಿಭಾಗದ 6 ತಜ್ಞರನ್ನು ಅಗತ್ಯವಿರುವ ಬೇರೆ ಆಸ್ಪತ್ರೆಗಳಿಗೆ ಏಕೆ ನಿಯೋಜಿಸಿಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ ವಿಡಿಯೋ ಕಾಲ್​ ಮೂಲಕ ರೋಗಿಗಳ ಜತೆಗೆ ಮಾತನಾಡಿದ ಸಚಿವರು, ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.

ರೋಗಿಗಳಿಗೆ ಸರಿಯಾದ ಹಾಸಿಗೆಗಳನ್ನು ಒದಗಿಸಿಲ್ಲವೆಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಹರಿಹಾಯ್ದರು ಸಚಿವರು, ಕರ್ತವ್ಯಲೋಪವೆಸಗಿದ ಇಬ್ಬರು ವೈದ್ಯಾಧಿಕಾರಿಗಳನ್ನು ಅಮಾನತಿಗೆ ಸೂಚಿಸಿದರು.

ವೈದ್ಯ ವೃತ್ತಿ ಪವಿತ್ರವಾದದ್ದು, ಕಟುಕರಂತೆ ವರ್ತಿಸಬಾರದು. ಕರೊನಾ ಮಣಿಸುವ ಹೋರಾಟ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸಬೇಕು. ಜನರು ಚಿಕಿತ್ಸೆಗಾಗಿ ರಸ್ತೆಗಳಲ್ಲಿ ಅಲೆಯುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಎಲ್ಲರೂ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಸಚಿವ ಸುಧಾಕರ್ ಹೇಳಿದರು.