ಬೆಂಗಳೂರು: ಮೈಕ್ರೋ ಫೈನಾನ್ಸ್ ಗಳ ಆಟಾಟೋಪ ಮಿರಿ ಮೀರಿದೆ. ಅನೇಕ ಜನರು ಮೈಕ್ರೋ ಫೈನಾನ್ಸ್ ಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಊರು ತೊರೆಯುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರ ನಾಲ್ಕಾರು ದಿನಗಳಿಂದ ಕಾನೂನು ತಜ್ಞರ ಜತೆ ಸರಣಿ ಸಮಾಲೋಚನೆ ನಡೆಸುತ್ತಿದೆ.
ಅದರ ಅಂಗವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವ ಹುನ್ನಾರವನ್ನು ತಡೆಯಲು ಆನ್ ಲೈನ್ ಪೋರ್ಟಲ್ ಮಾಡಿ ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂದು ಅಪ್ಡೇಟ್ ಮಾಡಬೇಕು ಎಂದು ಹೇಳಿದರು.
ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಿಭಾಯಿಸಬೇಕು. ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ಆರ್‌ಬಿಐ ನೀತಿಗೆ ಅನುಗುಣವಾಗಿರಬೇಕು ಎಂದು ತಾಕೀತು ಮಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನು ಸರ್ಕಾರ ತಿರಸ್ಕರಿಸಬದುದು. ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಹಾರ‌್ನ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಎಡಿಸಿ-ಎಸಿ ಒಳಗೊಂಡ ಒಂಬುಡ್ಸ್‌ಮನ್ ನೇಮಕ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಮೈಕ್ರೋಫೈನಾನ್ಸ್ ಕಂಪನಿಗಳು ಸಾಲದ ಹೆಸರಲ್ಲಿ ಬಡ ಜನರಿಂದ ಯಾವ ವಸ್ತು-ಆಸ್ತಿಗಳನ್ನು ಅಡಮಾನ ಇಡಿಸಿಕೊಳ್ಳುವಂತಿಲ್ಲ. ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ ಎಂಬುದೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವಂತೆ ಸಚಿವರು ಅಧಿಕಾರಿಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.