ನ್ಯೂಸ್

ವರ್ಷಗಳ ನಂತರ ಹಳೇ ಬಿಲ್ ಪಾವತಿಸಿದ ಗ್ರಾಹಕ! ಅಂಚೆ ಪತ್ರದಲ್ಲಿದ್ದ ಹಣ, ಅಕ್ಷರಗಳ ಕಂಡು ಮಾಲೀಕ ಭಾವುಕ | Payment

ಮೋಹನ್​ ಶೆಟ್ಟಿ

Shopkeeper: ತನ್ನ ಅಂಗಡಿಗೆ ದಿನನಿತ್ಯ ಬರುತ್ತಿದ್ದ ಗ್ರಾಹಕನೊಬ್ಬ ಖರೀದಿಸಿದ್ದ ಸಾಮಾಗ್ರಿಗಳ ಬಿಲ್​ ಕೊಡಲು ಹಣವಿಲ್ಲದೆ ಮಾಲೀಕನ ಸಂಪರ್ಕ ಕಳೆದುಕೊಳ್ಳುವುದಲ್ಲದೆ, ಆತನ ಮಳಿಗೆಯ ಅತ್ತ ಸುಳಿಯುವುದನ್ನೇ ನಿಲ್ಲಿಸಿದ್ದ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಅಂಗಡಿ ಮಾಲೀಕ, ಆತ ಖರೀದಿಸಿದ್ದೇನು? ಕೊಡಬೇಕಿದ್ದ ಹಣವೆಷ್ಟು (Payment) ಎಂಬುದನ್ನೇ ಮರೆತು ಹೋಗಿದ್ದ. ಆದರೆ, ಇಂದು ಎಷ್ಟೋ ವರ್ಷಗಳ ನಂತರ ಅದೇ ಗ್ರಾಹಕನಿಂದ ಬಂದ ಒಂದು ಪತ್ರ ಕಂಡು ಭಾರೀ ಅಚ್ಚರಿಗೆ ಒಳಗಾದ ಘಟನೆ ಕೇರಳದ ಮುನ್ನಾರ್​ನಲ್ಲಿ ವರದಿಯಾಗಿದೆ.

ಅಂಗಡಿ ಮಾಲೀಕನೇ ಮರೆತು ಹೋಗಿದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬರು ಅಂಚೆ ಮೂಲಕ ಅವರ ವಿಳಾಸಕ್ಕೆ ಕಳುಹಿಸಿದ್ದಾರೆ. ವರ್ಷಗಳ ಹಿಂದೆ ಖರೀದಿಸಿದ ದಿನಸಿಗೆ ನಾನು ನಿಮಗೆ ಕೊಡಬೇಕಿದ್ದ ಬಾಕಿ ಹಣವನ್ನು ಈಗ ಪಾವತಿಸುತ್ತಿದ್ದೀನಿ ಎಂದು ಹೇಳಿದ್ದಾನೆ. ಈ ಅಂಚೆ ಪತ್ರವನ್ನು ಕಂಡು ಮಾಲೀಕ ಭಾವುಕರಾಗಿದ್ದು, ವ್ಯಕ್ತಿಯ ವಿಳಾಸವೇನು? ಎಂದು ತಡಕಾಡಿದ್ದಾರೆ. ಆದ್ರೆ, ಪ್ರಯೋಜನವಾಗಿಲ್ಲ. ಕಾರಣ, ತನ್ನ ಸುಳಿವು ಬಿಟ್ಟುಕೊಡಲು ಇಚ್ಛಿಸದ ಅನಾಮಧೇಯ ಗ್ರಾಹಕ, 450 ರೂ. ಬಿಲ್​ ಬದಲಿಗೆ 1000 ರೂ. ಕಳಿಸುವ ಮೂಲಕ ತನ್ನ ನಿಯತ್ತು, ಪ್ರಮಾಣಿಕತೆಯನ್ನು ತೋರಿದ್ದಾನೆ.

ಪತ್ರದಲ್ಲಿ ಏನಿತ್ತು?

ಅಂಚೆ ಪತ್ರ ತೆರೆದ ಅಂಗಡಿ ಮಾಲೀಕನಿಗೆ ಅದರೊಳಗೆ ಎರಡು 500 ರೂ. ನೋಟು ಸಿಕ್ಕಿದ್ದು, ಒಂದು ಕೈಬರಹದ ಸಣ್ಣ ಪತ್ರವು ಸಿಕ್ಕಿದೆ. "ವರ್ಷಗಳ ಹಿಂದೆ ನಾನು ನಿಮ್ಮ ಅಂಗಡಿಯಿಂದ ಖರೀದಿಸಿದ್ದ ಕೆಲವು ದಿನಸಿ ಸಾಮಾಗ್ರಿಗಳಿಗೆ 450 ರೂ. ಪಾವತಿಸಬೇಕಾಗಿತ್ತು. ನನ್ನ ಜೀವನದಲ್ಲಿ ಆದ ಕೆಲವು ತೊಂದರೆಗಳಿಂದಾಗಿ ನಾನು ಸರಿಯಾದ ಸಮಯಕ್ಕೆ ನಿಮಗೆ ದುಡ್ಡು ಕೊಡಲು ಸಾಧ್ಯವಾಗಲಿಲ್ಲ. ಆದರೆ, ಈಗ ಕೊಡಲೇಬೇಕು ಎಂದೆನಿಸಿತು. ಹೀಗಾಗಿ ನಾನು ಮತ್ತು ನನ್ನ ಪತ್ನಿ ಇದರ ಬಗ್ಗೆ ಕುಳಿತು ಮಾತನಾಡಿದೆವು. 450 ಬಿಲ್​ ಆಗಿತ್ತು. ಆದರೆ, ಇಷ್ಟು ವರ್ಷಗಳ ನಂತರ ತಡವಾಗಿ ಪಾವತಿ ಮಾಡುತ್ತಿರುವ ಕಾರಣ, ಅದಕ್ಕೆ ತಗುಲಿದ ಬಡ್ಡಿ ಹಣವನ್ನು ಸೇರಿಸಿ ಒಟ್ಟು 1000 ರೂ. ಕೊಟ್ಟಿರುವೆ. ದಯವಿಟ್ಟು ತಪ್ಪಿಗಾಗಿ ಕ್ಷಮಿಸಿ" ಎಂದು ಬರೆದಿದ್ದಾರೆ.

ಪತ್ರದಲ್ಲಿ ಗ್ರಾಹಕನ ಹೆಸರು ಸೇರಿದಂತೆ ಯಾವುದೇ ಮಾಹಿತಿ ಇಲ್ಲದ ಕಾರಣ ಹಾಗೂ ಘಟನೆ ನಡೆದಿರುವುದು ವರ್ಷಗಳ ಹಿಂದೆ ಆಗಿರುವುದರಿಂದ ಅಂಗಡಿಯ ಮಾಲೀಕರಿಗೆ ಆ ವ್ಯಕ್ತಿ ಯಾರೆಂಬುದು ನೆನಪಾಗಿಲ್ಲ. ಅದೇನೇ ಇರಲಿ ಗ್ರಾಹಕನಿಂದ ಬಂದ ಈ ಹಣವನ್ನು ನಾನು ಮುನ್ನಾರ್​ನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀಡುವುದಾಗಿ ಮಾಲೀಕರು ಭಾವುಕರಾಗಿ ಹೇಳಿದ್ದಾರೆ,(ಏಜೆನ್ಸೀಸ್).