ನ್ಯೂಸ್

ಕಾರ್ಖಾನೆ, ವಾಣಿಜ್ಯ ಸಂಕೀರ್ಣಗಳ ಮಾಲೀಕರಿಗೆ ಕರೆಂಟ್ ಬಿಲ್ ಶಾಕ್

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸ್ತಬ್ಧವಾದ ಕಾರ್ಖಾನೆಗಳು, ವಾಣಿಜ್ಯ ಸಂಕೀರ್ಣಗಳ ಮಾಲೀಕರ ಕೈಸೇರಿದ ವಿದ್ಯುತ್ ಬಿಲ್ ಶಾಕ್ ನೀಡಿದೆ. ಸರ್ಕಾರದ ಸೂಚನೆಯಂತೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಮೀಟರ್ ರೀಡಿಂಗ್ ಬದಲಿಗೆ 3 ತಿಂಗಳ ಸರಾಸರಿ ವಿದ್ಯುತ್ ಬಳಕೆ ಲೆಕ್ಕ ಹಾಕಿ ಆನ್​ಲೈನ್/ಮೊಬೈಲ್​ಗೆ ಎಸ್​ಎಂಎಸ್ ಮೂಲಕ ಬಿಲ್ ಕಳುಹಿಸಿವೆ. ಈ ಬಿಲ್​ನಲ್ಲಿ ಬಳಸಿದ ವಿದ್ಯುತ್ ಜತೆಗೆ ನಿಗದಿತ ಶುಲ್ಕ (ಊಇ) ಸೇರಿಸಿವೆ. ಲಾಕ್​ಡೌನ್ ಮುಗಿದು ಬಾಡಿಗೆದಾರರು ಮರಳಿದ ಬಳಿಕ ಬಳಸಿದ ವಿದ್ಯುತ್​ಗೆ ಬಿಲ್ ಕಟ್ಟಿಸಬಹುದು.

ಆದರೆ ನಿಗದಿತ ಶುಲ್ಕದ್ದೇ ದೊಡ್ಡ ಭಾರ ಎನ್ನುತ್ತಿದ್ದಾರೆ ಉದ್ಯಮಿಗಳು. ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿ ನಷ್ಟವಾಗಿದ್ದು, ವಿನಾಯಿತಿ ನೀಡಬೇಕೆಂದು ಕೆಲವರು ಮೊರೆಯಿಟ್ಟರೆ, ಕಾಲಾವಕಾಶ ನೀಡಿ ಕಂತಿನಲ್ಲಿ ಕಟ್ಟಲು ಅವಕಾಶ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.

ಎಸ್ಕಾಂ ಸಮರ್ಥನೆ: ನಿಗದಿತ ಶುಲ್ಕ ಭರಿಸುವುದಾಗಿ ಸರ್ಕಾರ ಒಪ್ಪಿ ಕೆಇಆರ್​ಸಿಗೆ ಸಲ್ಲಿಸಬೇಕು. ಈ ವಿಷಯದಲ್ಲಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದು ಎಸ್ಕಾಂ ಮೂಲಗಳು ಸಮರ್ಥಿಸಿಕೊಂಡಿವೆ.