ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿರುವ ಆಮ್ ಆದ್ಮಿ ಪಾರ್ಟಿ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರುವ ಸನಿಹದಲ್ಲಿ ಬಂದು ನಿಂತಿದೆ.
ಭಾರಿ ವಿಜಯೋತ್ಸವ ಆಚರಣೆ ನಡುವೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಅಭ್ಯರ್ಥಿ ಅಮಾನತುಲ್ಲಾ ಖಾನ್ ತಮ್ಮ ಕ್ಷೇತ್ರದ ಓಕ್ಲಾ ಮತದಾರರು ಬಿಜೆಪಿಗೆ ಶಾಕ್ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೆಸರು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಅಮಾನತುಲ್ಲಾ ಖಾನ್ ಬಿಜೆಬಿ ಅಭ್ಯರ್ಥಿ ಬ್ರಹಮ್ ಸಿಂಗ್ ಎದುರು ಬರೋಬ್ಬರಿ 70 ಸಾವಿರ ಮತಗಳ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ ಪೌರತ್ವ ತಿದ್ದುಪಡಿ ವಿರುದ್ಧ ಕಳೆದ ಒಂದೂವರೆ ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿರುವ ಶಾಹೀನ್ ಬಾಘ್ ಏರಿಯಾ ಇದೇ ಓಕ್ಲಾ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಇದು ಕೂಡ ಚುನಾವಣಾ ಫಲಿತಾಂಶದಲ್ಲಿ ಪ್ರಭಾವ ಬೀರಿದೆ ಎಂಬುದು ಮತಗಳ ಅಂತರದಿಂದ ತಿಳಿದುಬರುತ್ತಿದೆ.
ಇತ್ತೀಚೆಗೆ ನಡೆದ ದೆಹಲಿ ಚುನಾವಣಾ ಸಮಾವೇಶವೊಂದರಲ್ಲಿ ಅಮಿತ್ ಷಾ ಮಾತನಾಡಿ, ಮತಯಂತ್ರದ ಬಟನ್ ಅನ್ನು ಕೋಪದಿಂದಲೇ ಒತ್ತಿ. ಏಕೆಂದರೆ ಅದರ ಶಾಕ್ ಶಾಹೀನ್ ಬಾಘ್ನಲ್ಲಿರುವ ಪ್ರತಿಭಟನಾಕಾರರ ಅನುಭವಕ್ಕೆ ಬರಬೇಕೆಂದು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು.
ಇದೀಗ್ ಅಮಿತ್ ಷಾ ಹಿಂದಿನ ಹೇಳಿಕೆಯನ್ನು ಮರು ನೆನಪಿಸಿ, ಖಾನ್ ತಿರುಗೇಟು ನೀಡಿದ್ದಾರೆ. ಸದ್ಯದ ದೆಹಲಿ ಟ್ರೆಂಡ್ ಪ್ರಕಾರ ಆಪ್ 63 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡರೆ, ಬಿಜೆಪಿ 7 ಹಾಗೂ ಕಾಂಗ್ರೆಸ್ 0 ಮೂಲಕ ಅಸ್ತಿತ್ವವನ್ನೇ ಕಳೆದುಕೊಂಡಿದೆ. (ಏಜೆನ್ಸೀಸ್)