ಭದ್ರಾವತಿ: ರಾಜ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಬೀದಿ ನಾಯಿಗಳ ಹಾವಳಿ ವಿಚಾರ ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಯುವ ಸಂಸತ್ ಅಧಿವೇಶದಲ್ಲೂ ಮಾರ್ದನಿಸಿತು.
ಶಾಲಾ ಶಿಕ್ಷಣ ಇಲಾಖೆಯಿಂದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಳ್ಳಿಕೆರೆ ಸೇಂಟ್ ಡೋಮಿನಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕೆ.ಪಿ.ಭುವನ್ ಪಟೇಲ್ ಸಭಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಹು ಚರ್ಚೆಯಾಯಿತು.
ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆ ವೇಳೆ ವಿಪಕ್ಷ ಸದಸ್ಯೆ ಸೇಂಟ್ ಚಾರ್ಲ್ಸ್ ಶಾಲೆಯ ವಿದ್ಯಾರ್ಥಿನಿ ಆಲ್ವಿನಾ, ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು ಶಾಲೆಗೆ ತೆರಳುವ ಮಕ್ಕಳ ಮೇಲೆ, ಯುವ ಸಮುದಾಯದ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2025ರ ವೇಳೆ ರಾಜ್ಯದಲ್ಲಿ 2.86 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ, ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಇದಕ್ಕೆ ಜನಸಾಮಾನ್ಯರ ಸಹಕಾರವೂ ಬೇಕು ಎಂದು ಆಡಳಿತ ಪಕ್ಷದ ಮನೋಜ್ ಪ್ರತಿಕ್ರಿಯಿಸಿದರು.
ಆನವೇರಿ ಶಾಲೆಯ ವಿಪಕ್ಷದ ಸದಸ್ಯ ಜಿ.ವಿ.ದೈವಿಕ್, ಸರ್ಕಾರಿ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚುತ್ತಿದೆ. ಮದ್ಯದ ಬಾಟಲುಗಳು, ಬೀಡಿ, ಸಿಗರೇಟಿನ ತುಂಡುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಅದನ್ನು ಮಕ್ಕಳೇ ತೆಗೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ದನಿಗೂಡಿಸಿದ ಕೆಲ ಸದಸ್ಯರು ಇತ್ತೀಚೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ಸಿಗುತ್ತಿಲ್ಲ. ಮದ್ಯಾಹ್ನದ ಬಿಸಿಯೂಟ ಕಳಪೆಯಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೆ? ಇದಕ್ಕೆ ಶಿಕ್ಷಣ ಸಚಿವರು ಉತ್ತರಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ಶಿಕ್ಷಣ ಸಚಿವೆ ನಿಸರ್ಗಾ ಹಾಗೂ ಲೋಕೇಶ್ ಮಾತನಾಡಿ, ಮಕ್ಕಳ ಆಧಾರ್ ಕಾರ್ಡ್ ಇಕೆವೈಸಿ ಆಗದಿರುವುದರಿಂದ ವಿದ್ಯಾರ್ಥಿ ವೇತನಕ್ಕೆ ಸಮಸ್ಯೆಯಾಗಿದೆ. ಇದನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಶಾಲಾ ವಲಯದಲ್ಲಿ ಮದ್ಯದ ಬಾಟಲಿಗಳ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ. ಎಲ್ಲ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಥಮ ಚಿಕಿತ್ಸೆಗಷ್ಟೇ ಸೀಮಿತ: ಅಪಘಾತವಾದಾಗ ಪ್ರಥಮ ಚಿಕಿತ್ಸೆ ನೀಡಲಷ್ಟೇ ಸರ್ಕಾರಿ ಆಸ್ಪತ್ರೆಗಳು ಸೀಮಿತವಾಗಿವೆ. ಹೆಚ್ಚಿನ ಚಿಕಿತ್ಸೆ ನೀಡುವ ಬದಲಾಗಿ ಬೇರೆಡೆ ಹೋಗುವಂತೆ ಹೇಳಿ ಕಳುಹಿಸಲಾಗುತ್ತಿದೆ. ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗೆ ಹೋಗಬೇಕಾದರೆ ಸರ್ಕಾರಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಏನು ಎಂದು ಸಿಂಚನಾ ಪ್ರಶ್ನಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ತಡೆಗಟ್ಟುವಂತೆ ಸರ್ಕಾರ ಮುಂದಾಗಬೇಕೆಂದು ಫಾತಿಮಾ ಒತ್ತಾಯಿಸಿದರು. ಬಿಇಒ ಎ.ಕೆ.ನಾಗೇಂದ್ರಪ್ಪ, ಪೌರಾಯುಕ್ತ ಕೆ.ಎನ್.ಹೇಮಂತ್, ಕ್ಷೇತ್ರ ಸಮನ್ವಯಾಧಿಕಾರಿ ಪಂಚಾಕ್ಷರಪ್ಪ ಇತರರಿದ್ದರು. ತಾಲೂಕಿನ 37 ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ, ನಟಿ ಬಿ.ಸರೋಜಾ ದೇವಿ ಅವರ ನೆನಪಿನಲ್ಲಿ ಮೌನಾಚರಿಸಲಾಯಿತು. ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಮಕ್ಕಳ ಸಂಸತ್ ಅನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಸದಸ್ಯ ಬಿ.ಕೆ.ಮೋಹನ್, ಚನ್ನಪ್ಪ ವೀಕ್ಷಿಸಿದರು.