ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮಣ್ಣಿನ ಗೌರಿ-ಗಣೇಶ ವಿಗ್ರಹ ತಯಾರಕರ ಮತ್ತು ಮಾರಾಟಗಾರರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಶಿವಕುಮಾರ್, ನಿತ್ಯ, ವಿನಯ್ ಕುಮಾರ್, ಸಿದ್ದಪ್ಪಾಜಿ, ಮಂಜುನಾಥ್, ಪುಟ್ಟಸ್ವಾಮಿ ಶೆಟ್ಟಿ, ಬಸವಣ್ಣ, ಮಮತಾ, ಗೌರಿ, ಆಶಾ, ಮಹದೇವಸ್ವಾಮಿ, ರಂಗಸ್ವಾಮಿ, ಮಹೇಶ್ ಇತರರು ಪಾಲ್ಗೊಂಡಿದ್ದರು. 
ನ್ಯೂಸ್

ಪಿಒಪಿ ಗೌರಿ-ಗಣೇಶ ತಯಾರಿಕೆ, ಮಾರಾಟಕ್ಕೆ ಕಡಿವಾಣ ಹಾಕಿ

ಪ್ರಮುಖ ಮುಖ್ಯಾಂಶಗಳು

  • ಮಣ್ಣಿನ ಮೂರ್ತಿಗಳ ತಯಾರಕರು ಮತ್ತು ಮಾರಾಟಗಾರರಿಂದ ಒತ್ತಾಯ
  • ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಪಿಒಪಿ ಗಣೇಶ ವಿಗ್ರಹಗಳ ಅಕ್ರಮ ತಯಾರಿಕೆ ತ್ತು ಸಾಗಾಣೆ, ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಮಣ್ಣಿನ ಕಲಾವಿದರ ಹಿತರಕ್ಷಣೆ ಕಾಯಬೇಕೆಂದು ಒತ್ತಾಯಿಸಿ ಮಣ್ಣಿನ ಗೌರಿ-ಗಣೇಶ ವಿಗ್ರಹ ತಯಾರಕರ ಮತ್ತು ಮಾರಾಟಗಾರರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆಯಲ್ಲಿ ತೆರಳಿದರು. ಗುಂಡ್ಲುಪೇಟೆಯಲ್ಲಿ ಪಿಒಪಿ ಗೌರಿ-ಗಣೇಶ ಮೂರ್ತಿಗಳ ಮಾರಾಟ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಕೆಲ ದಂಧೆಕೋರರು ಹೊರ ರಾಜ್ಯಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇದರಿಂದ ಪರಿಸರಕ್ಕೆ ಅಪಾರ ಹಾನಿಯಾಗುವುದರ ಜತೆಗೆ ತಲೆಮಾರುಗಳಿಂದ ಮಣ್ಣಿನ ಗಣೇಶ ವಿಗ್ರಹ ತಯಾರಿಕೆಯನ್ನು ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ಪಿಒಪಿ ವಿಗ್ರಹವನ್ನು ಬಹಿರಂಗವಾಗಿ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕೆಲವು ವ್ಯಾಪಾರಿಗಳು ಪಿಒಪಿ ವಿಗ್ರಹಗಳಿಗೆ ವಿಶೇಷ ಹಾಗೂ ಮಣ್ಣಿನ ಬಣ್ಣದ ಲೇಪನ ನೀಡಿ, ಅವುಗಳನ್ನು ಮಣ್ಣಿನ ವಿಗ್ರಹಗಳಂತೆ ಕಾಣುವ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಇವುಗಳನ್ನು ಗುರುತಿಸುವುದು ಕಷ್ಟಕರವಾಗುತ್ತದೆ. ಇದರ ಪರಿಣಾಮವಾಗಿ ನೈಜ ಮಣ್ಣಿನ ವಿಗ್ರಹ ತಯಾರಿಸುವ ಸ್ಥಳೀಯ ಕಲಾವಿದರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ತಮ್ಮ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಿಒಪಿ ಗಣೇಶ ಮೂರ್ತಿ ತಯಾರಿಸುವವರು, ಹೊರಜಿಲ್ಲೆಗಳಿಂದ ತಂದು ಮಾರಾಟ ಮಾಡುವವರು, ಮಾರಾಟಕ್ಕೆ ಸಹಕಾರ ನೀಡುವವರ ವಿರುದ್ಧ ಕಾನೂನುಬದ್ಧವಾಗಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಆರಂಭಿಸಿ ಪಿಒಪಿ ಗಣೇಶ ವಿಗ್ರಹ ತಯಾರಿಸುತ್ತಿದ್ದರೆ ಸಾರ್ವಜನಿಕರು ಮಾಹಿತಿ ನೀಡಲು ತಿಳಿಸಬೇಕು. ದೂರು ಬಂದ ತಕ್ಷಣ ಅಧಿಕಾರಿಗಳು ಕ್ರಮವಹಿಸಬೇಕು. ಪಿಒಪಿ ಮತ್ತು ಮಣ್ಣಿನ ಗಣೇಶನ ಮೂರ್ತಿಗಳನ್ನು ಗುರುತಿಸುವ ಪರಿಣಿತ ಕಲಾವಿದರು, ತಾಂತ್ರಿಕ ತಜ್ಞರು ಹಾಗೂ ಪರಿಸರ ತಜ್ಞರನ್ನು ಒಳಗೊಂಡ ಪರಿಶೀಲನಾ ತಂಡವನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಶೀಘ್ರದಲ್ಲೇ ಮಣ್ಣಿನ ಗಣೇಶ ತಯಾರಕರ ಸಭೆಯನ್ನು ಕರೆದು, ಎಲ್ಲರಿಗೂ ಅಗತ್ಯ ಮಾರ್ಗದರ್ಶನ ನೀಡಬೇಕು. ಪಿಒಪಿ ಗಣೇಶ ಮೂರ್ತಿಗಳ ಕುರಿತು ಆನ್‌ಲೈನ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಮಣ್ಣಿನ ಗಣೇಶಮೂರ್ತಿ ತಯಾರಿಸಬೇಕೆಂದು ಷರತ್ತು ವಿಧಿಸಬೇಕು. ಪರಿಸರ ಸಂರಕ್ಷಣೆ, ಜಲಮೂಲಗಳ ರಕ್ಷಣೆ, ಮಣ್ಣಿನ ಗಣೇಶ ತಯಾರಿಸುವ ಸಾವಿರಾರು ಕಲಾವಿದರ ಜೀವನೋಪಾಯದ ದೃಷ್ಟಿಯಿಂದ ಅಗತ್ಯ ಕ್ರಮತೆಗೆದುಕೊಳ್ಳಬೇಕೆಂದು ಕೋರಿ ಶಿರಸ್ತೇದಾರ್ ರಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ನಿತ್ಯ, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಸಿದ್ದಪ್ಪಾಜಿ, ಮಂಜುನಾಥ್, ಪುಟ್ಟಸ್ವಾಮಿ ಶೆಟ್ಟಿ, ಬಸವಣ್ಣ, ಮಮತಾ, ಗೌರಿ, ಆಶಾ, ಮಹದೇವಸ್ವಾಮಿ, ರಂಗಸ್ವಾಮಿ, ಮಹೇಶ್ ಇತರರು ಭಾಗವಹಿಸಿದ್ದರು.