ಕಂಚಿಶ್ರೀಗಳು ಅರಂಬೂರು ಭಾರದ್ವಾಜಾಶ್ರಮದ ನವೀಕೃತ ಶ್ರೀ ಕಂಚಿಕಾಮಕೋಟಿ ವೇದ ವಿದ್ಯಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸುಳ್ಯ: ವಿದ್ಯಾ ಮಾರ್ಗ, ಭಕ್ತಿ ಮಾರ್ಗ, ಜ್ಞಾನ ಮಾರ್ಗ, ವೈಜ್ಞಾನಿಕ ಮಾರ್ಗದ ಮೂಲಕ ವಿಕಸನವಾದುದು ನಮ್ಮ ಸನಾತನ ಸಂಸ್ಕೃತಿ. ವೇದ ಅಧ್ಯಯನ ಭಾರತೀಯ ಸಂಸ್ಕೃತಿಯ ಉಳಿವಿಗೆ ಪೂರಕ ಎಂದು ಕಾಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ಅರಂಬೂರು ಭಾರದ್ವಾಜಾಶ್ರಮದ ನವೀಕೃತ ಶ್ರೀ ಕಾಂಚಿಕಾಮಕೋಟಿ ವೇದ ವಿದ್ಯಾಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.ನಾವು ಧರ್ಮ ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ವಿದ್ಯಾರ್ಥಿಗಳು ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಶಿಕ್ಷಣ ನೀಡುವ ಲೌಖಿಕ ಶಿಕ್ಷಣದ ಜತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿ, ಸಂಸ್ಕಾರ ಕಲಿಸುವ ಧಾರ್ಮಿಕ ಶಿಕ್ಷಣ ಪಡೆಯಬೇಕು ಎಂದರು.
ಪರಿಸರದ 25 ವಸಂತ ವೇದ ಪಾಠಶಾಲೆ, ನಿರಂತರ ವೇದ ಪಾಠಶಾಲೆ, ವೇದ ವಿದ್ವಾಂಸರು, ವೇದ ವಿದ್ಯಾಲಯದಲ್ಲಿ ಕಲಿತು ಉನ್ನತ ಅಧ್ಯಯನ ನಡೆಸಿದ ವಿದ್ಯಾರ್ಥಿಗಳನ್ನು ಕಾಂಚಿ ಪೀಠಾಧಿಪತಿಗಳು ಗೌರವಿಸಿದರು.
ರಾಜ್ಯ ಮಾನವ ಹಕ್ಕು ಆಯೋಗ ಅಧ್ಯಕ್ಷ ಟಿ.ಶ್ಯಾಮ್ ಭಟ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಭಾರದ್ವಾಜಾಶ್ರಮದ ವ್ಯವಸ್ಥಾಪಕ ರವಿಶಂಕರ್ ಭಟ್, ಗೋವಿಂದರಾಜ್ ಭಾರದ್ವಾಜ್, ಕಶೆಕೋಡಿ ಸೂರ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ವೇದವಿದ್ಯಾಲಯದ ವೆಂಕಟೇಶ್ವರ ಶಾಸ್ತ್ರಿ ನಿರೂಪಿಸಿದರು.