ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪ್ರವಚನ ಮಾಲಿಕೆ ಮುತ್ತಿನಂತ ಮಾತು ಅಭಿಯಾನವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಪ್ರಭುಲಿಂಗ ಶಾಸ್ತ್ರಿ, ಅರವಿಂದ ದೀಕ್ಷಿತ್, ರುದ್ರೇಶ್ ಇದ್ದರು. 
ನ್ಯೂಸ್

ಸಾಹಿತ್ಯ, ಸಂಸ್ಕೃತಿ ಪ್ರವಚನದಿಂದ ಸಂಸ್ಕಾರ ಬೆಳವಣಿಗೆ

ಚಿಕ್ಕಮಗಳೂರು: ಸಾಹಿತ್ಯ ಮತ್ತು ಸಂಸ್ಕೃತಿ ಪ್ರವಚನದಿಂದ ಸಂಸ್ಕಾರ ಬೆಳವಣಿಗೆ ಸಾಧ್ಯ, ಸತ್ವಪೂರ್ಣ ಮಾತುಗಳು ಸಮಾಜಮುಖಿ ಕಾರ್ಯಗಳಿಗೆ ಪ್ರೇರಕವಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಬಸವನಹಳ್ಳಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರಾವಣ ಮಾಸದ ಪ್ರವಚನ ಮಾಲಿಕೆಯ ಮುತ್ತಿನಂತ ಮಾತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
12ನೇಯ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ್ದರು. ಅವರ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಕಾಯಕವೇ ಕೈಲಾಸ ಎಂಬುದು ಸಾರ್ವಕಾಲೀಕ ಮೌಲ್ಯದ ನುಡಿ. ನಮ್ಮ ಮಾತು ಮತ್ತು ಗುರಿ ಸಕಾರಾತ್ಮಕವಾಗಿರಬೇಕು. ಕಂಡ ಕನಸನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಇರಬೇಕು ಎಂದು ಹೇಳಿದರು.
ಚಿಂತಕ ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ನಮ್ಮೆಲ್ಲ ಮನೆ ಮತ್ತು ಶಿಕ್ಷಣ ಸಂಸ್ಥೆಗಳು ಮಾತು ಕಲಿಸುವ ಪ್ರಯೋಗ ಶಾಲೆಗಳಾಗಬೇಕು. ಮಾತಿನ ಮಾಲಿನ್ಯ ತಡೆಗಟ್ಟಬೇಕು. ಭವ್ಯ-ದಿವ್ಯ ಮಾತುಗಳಿಂದ ಜೀವನದ ಸಾರ್ಥಕತೆ ಎಂದರು.
ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಮಾತೆಂಬುದು ಜ್ಯೋತಿರ್ಲಿಂಗವೆಂದು ನುಡಿದಿದ್ದರು. ಧ್ವನಿ ಬತ್ತಿದ ಸಮೂಹಕ್ಕೆ ಅಂದು ಮಾತನಾಡಲು ಪ್ರೇರೇಪಿಸಿ ದಂದಣ ದತ್ತಣ ಎಂದಾದರೂ ಮಾತನಾಡಬೇಕೆಂದು ಸ್ಫೂರ್ತಿ ನೀಡಿದ್ದರು. ಮಾತಿನ ಬಗ್ಗೆ ನೂರಾರು ವಚನಗಳು ಅಂದಿನಿಂದಲೂ ಸೃಷ್ಟಿಯಾಗುತ್ತಿವೆ.
ಆಧುನಿಕ ಕವಿ ಚನ್ನವೀರಕಣವಿ ಅವರು ನಾವಾಡುವ ಮಾತು ಮೃದು ಮಧುರವಾಗಿ ಹಾರದಂತಿರಬೇಕು. ಆಡುವ ಮಾತು ಮನಸ್ಸನ್ನು ಅರಳಿಸಬೇಕೆ ಹೊರತು ಕೆರಳಿಸಬಾರದು. ಮುತ್ತಿನಂತ ಮಾತು ಹಿತವಾಗಿರುತ್ತದೆ. ನಲ್ನುಡಿ ಕಿವಿ ಮೇಲೆ ಬಿದ್ದರೆ ಸಂತೋಷ-ಆನಂದ ಹೊಮ್ಮಬೇಕು ಎಂದು ತಿಳಿಸಿದರು.
ಪ್ರಚಾರ್ಯ ಸತ್ಯನಾರಾಯಣ ಮಾತನಾಡಿ, ಮಾತಿನ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಮಾತನ್ನು ಮುತ್ತು, ಚೂಡಾಮಣಿ, ವಜ್ರ ವೈಡುರ್ಯಗಳಿಗೆ ಹೆಚ್ಚಾಗಿ ಸಮೀಕರಿಸಿ ಕವಿತೆ ಸಾಹಿತ್ಯಗಳಲ್ಲಿ ಕಂಡುಬರುತ್ತದೆ ಎಂದು ಬಣ್ಣಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಸೆ.14ರವರೆಗೆ ಶ್ರಾವಣ ಮಾಸ ಪರ್ಯಂತ ಮುತ್ತಿನಂತ ಮಾತು ಅಭಿಯಾನ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ನಾಡಿನ ಹಿರಿಯ ಸಾಹಿತಿ ಚಟ್ನಳ್ಳಿ ಮಹೇಶ್ ಅವರು ವಚನ ಸಾಹಿತ್ಯದಲ್ಲಿ ಬರುವ ಸಮಾಜಮುಖಿ ಚಿಂತನೆ, ಸಾಹಿತ್ಯದ ಮಹತ್ವವನ್ನು ಸಾರುವ 33 ಉಪನ್ಯಾಸಗಳ ಮಾಲೆಯನ್ನು ಕಟ್ಟಿಕೊಡಲಿದ್ದಾರೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದದೀಕ್ಷಿತ್, ಪ್ರತಿಷ್ಠಾನದ ಸಂಚಾಲಕ ರುದ್ರೇಶ್ ಕಡೂರು, ಉಪನ್ಯಾಸಕರಾದ ಮಂಜುನಾಥ ಭಟ್, ದಯಾನಂದ, ಸುರೇಶ್ ಹಾಜರಿದ್ದರು.