ತೀರ್ಥಹಳ್ಳಿ: ಹೆತ್ತವರನ್ನು ಪೋಷಿಸುವ ಬದ್ಧತೆಯೊಂದಿಗೆ ದೇಶಪ್ರೇಮ ಮೂಡಿಸುವ ಸಂಸ್ಕಾರಯುತ ಶಿಕ್ಷಣ ನೀಡುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪಟ್ಟಣದ ಸಹ್ಯಾದ್ರಿ ಕೇಂದ್ರೀಯ ಮಾದರಿ ಶಾಲೆಯ 2024-25ನೇ ಸಾಲಿನ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
ಕಳೆದ ಮೂರೂವರೆ ದಶಕಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಶುಲ್ಕದ ಹೊರೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕೊಡುಗೆ ಅನನ್ಯ. ಭಾರತೀಯ ಸಂಸ್ಕೃತಿಯಲ್ಲಿ ಹೆತ್ತವರನ್ನು ಅವರ ಕೊನೆಯ ಕ್ಷಣಗಳಲ್ಲಿ ವೃದ್ಧಾಶ್ರಮಕ್ಕೆ ಸೇರಿಸದೆ ಮಗುವಿನಂತೆ ಪ್ರೀತಿಸುವ ಕರ್ತವ್ಯ ಪ್ರಜ್ಞೆಯನ್ನು ಶಿಕ್ಷಣ ಮೂಡಿಸಬೇಕು. ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿರುವ ನಮ್ಮ ಸಂವಿಧಾನದಲ್ಲಿ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ನೀಡಿದೆಯಾದರೂ ಪ್ರಜೆಯಾಗಿ ದೇಶಕ್ಕೆ ನಾವು ನೀಡಬೇಕಾದ ಹೊಣೆಗಾರಿಕೆಯನ್ನೇ ಮರೆತಿರುವುದು ಬೇಸರದ ಸಂಗತಿ ಎಂದರು.
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳು, ಭ್ರಷ್ಟಾಚಾರ ಮುಂತಾದ ಅನಾಹುತಗಳು ವಿದ್ಯಾವಂತರಿಂದಲೇ ನಡೆದಿರುವುದು ಆತಂಕದ ಸಂಗತಿ. ಸೇವಾ ಭಾವದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಸಚ್ಚಾರಿತ್ರ್ಯದೊಂದಿಗೆ ರಾಷ್ಟ್ರಭಕ್ತಿ ಮೂಡಿಸುವ ಅಗತ್ಯವಿದೆ ಎಂದರು.
ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಮಾತನಾಡಿ, ಐಸಿಎಸ್‌ಇ ಶಿಕ್ಷಣ ಮಾದರಿಯ ಈ ಶಾಲೆಯಲ್ಲಿ ಕೇವಲ ಅಂಕಗಳಿಗೆ ಆದ್ಯತೆ ನೀಡದೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದೇವೆ. ಫಲಿತಾಂಶದ ಜತೆ ಕ್ರೀಡೆ, ಮತ್ತಿತರ ಚಟುವಟಿಕೆಗಳಿಂದ ರಾಜ್ಯಮಟ್ಟದಲ್ಲಿ ಈ ಶಾಲೆ ಗಮನ ಸೆಳೆದಿದೆ ಎಂದರು.
ತಹಸೀಲ್ದಾರ್ ಎಸ್.ರಂಜಿತ್, ಗ್ರಾಪಂ ಅಧ್ಯಕ್ಷೆ ಅನಿತಾ ಶ್ರೀಧರ್, ಜಿ.ಎನ್.ಪ್ರಕಾಶ್, ಪ್ರಾಚಾರ್ಯ ಜಗದೀಶ್, ಕಾರ್ಯದರ್ಶಿ ಬಿ.ವಿ.ಸುಧೀರ್, ನಿರ್ದೇಶಕ ವೀರೇಂದ್ರ ಇದ್ದರು.