ಸಕಲೇಶಪುರ : ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ ಎಂದು ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಮಲೆನಾಡು ವೀರಶೈವ ಸಮಾಜ ಶುಕ್ರವಾರ ಹಮ್ಮಿಕೊಂಡಿದ್ದ ಬಸವೇಶ್ವರ ಕಂಚಿನ ಪುತ್ಥಳಿ ಉದ್ಘಾಟನೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಕ್ಷೋಭೆಗಳು ತುಂಬಿ ತುಳುಕುತ್ತಿದ್ದ ವೇಳೆ ಜನ್ಮತಳೆದ ಬಸವಣ್ಣ ಸಮಾಜದ ಸುಧಾರಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು. ಭೂಮಿ ಮೇಲೆ ಹುಟ್ಟಿದ ಯಾವುದೇ ದಾರ್ಶನಿಕರು ಮಹಿಳೆಯರ ಬಗ್ಗೆ ಮಾತನಾಡಲು ಚಿಂತಿಸದ ಕಾಲದಲ್ಲಿ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಸ್ವತಂತ್ರ ನೀಡಿದವರು ಬಸವಣ್ಣನವರು. ಕಾಯಕ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಕೀರ್ತಿ ಸಹ ಅವರಿಗೆ ಸಲ್ಲುತ್ತದೆ. ಪ್ರಪಂಚದ ಮೊದಲ ಪಾರ್ಲಿಮೆಂಟ್ ಸ್ಥಾಪನೆ ಮಾಡಿದರು. ವಚನಗಳ ಸಾರವನ್ನು ಮಕ್ಕಳಿಗೆ ಬೋಧನೆ ಮಾಡಬೇಕಿದೆ. ಇದರಿಂದಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ವೃದ್ಧಿಸಲಿದ್ದು ಜೀವನದ ಪಾಠವಾಗಲಿದೆ ಎಂದರು.
ನಮ್ಮ ಸಂವಿಧಾನದ ಕೆಲವು ವಿಚಾರಗಳನ್ನು ಹಲವು ಸಲ ತಿದ್ದುಪಡಿ ಮಾಡಿದ್ದೇವೆ. ಆದರೆ ಬಸವಣ್ಣನವರು ನೀಡಿದ ವಚನಗಳ ಸಾಲು ಒಮ್ಮೆಯೂ ಬದಲಾಗಿಲ್ಲ. ಇಂತಹ ಮಹಾನುಭಾವರ ಜೀವನ ಸಂದೇಶವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಪ್ರಜ್ವಲಿಸಲಿದ್ದೀರಿ ಎಂದ ಅವರು, ಪ್ರಪಂಚದ ಎಲ್ಲ ಜನರು ನಮ್ಮವರು ಎಂದ ಬಸವಣ್ಣನವರ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಾಲನ್ನು ಯಾವ ಧರ್ಮದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ವಿಶ್ವ ಸಾಹಿತ್ಯವೆ ಒಂದು ತೂಕವಾದರೆ ವಚನಸಾಹಿತ್ಯದ ತೂಕವೇ ಒಂದು. ಇಂತಹ ವಚನಗಳನ್ನು ನೀಡಿದ ಬಸವಣ್ಣನವರ ಹೆಸರು ಅಜರಾಮರವಾಗಿರಲಿದೆ. ಜಾತಿ ಸಂಕೋಲನೆಯನ್ನು ಮೆಟ್ಟಿ ನಿಲ್ಲುವ ಮೊದಲ ಯತ್ನ ಬಸವಣ್ಣನವರಿಂದ ನಡೆದಿದೆ. ಇದರಿಂದಾಗಿ ಬಸವಣ್ಣನವರ ಅನುಯಾಯಿಗಳು ಪ್ರತಿನಿಧಿಸುವ ವೀರಶೈವ ಸಮಾಜ ಇಂದಿಗೂ ಎಲ್ಲ ಸಮಾಜವನ್ನು ನಮ್ಮವರು ಎಂದು ಅಪ್ಪಿಕೊಂಡು ನಡೆಯುವ ಏಕೈಕ ಸಮಾಜವಾಗಿದೆ ಎಂದರು.
ಮಲೆನಾಡು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎಚ್.ಎಂ ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಪ್ಪ, ಉಪಾಧ್ಯಕ್ಷ ಗಗನ್, ಅಕ್ಕ ಮಹಾದೇವಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕೋಮಲಾ ದಿನೇಶ್, ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್, ಓಂಕಾರ್‌ಮೂರ್ತಿ, ಮಳಲಿ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.