ಶಿವಮೊಗ್ಗ: ಮಹಾನಿಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಮಕ್ಕಳಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ, ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಇದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೂ ಮರೆಯುವ ಕಾಲ. ಹಾಗಾಗಿ ನಾರಾಯಣಗುರು, ನುಲಿಯ ಚಂದಯ್ಯ ಸೇರಿ ಅನೇಕ ಮಹಾನಿಯರ ಆದರ್ಶ ಗುಣಗಳನ್ನು ಮಕ್ಕಳಲ್ಲಿ ತುಂಬಬೇಕು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಬೇಕಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಎಲ್ಲರನ್ನು ಮರೆಯುವ ಕಾಲ ದೂರವಿಲ್ಲ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳು ಬೆಳೆಯುತ್ತಿರುವ ಮಕ್ಕಳಿಗೆ ಮತ್ತು ಸಮಾಜಕ್ಕೆ ಅತಿ ಅವಶ್ಯವಿದೆ. ಹಾಗಾಗಿ ಪಠ್ಯಪುಸ್ತಕಗಳಲ್ಲಿ ಅವರ ತತ್ವಗಳನ್ನು ಅಳವಡಿಸಲಾಗಿದೆ. ಸಮಾಜ ಸುಧಾರಕ, ತತ್ವಜ್ಞಾನಿಯೂ ಆದ ನಾರಾಯಣಗುರುಗಳ ಜಯಂತಿ ಆಚರಣೆ ಮಾಡುವಾಗ ಅವರ ತತ್ವಗಳ ಬಗ್ಗೆ ತಿಳಿಯದಿದ್ದರೆ ಅದರ ಪ್ರಯೋಜನ ಇರುವುದಿಲ್ಲ. ಪ್ರತಿಯೊಬ್ಬರು ಅವರ ತತ್ವಗಳನ್ನು ತಿಳಿಯಬೇಕು ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಫಕೀರಪ್ಪ ಭಜಂತ್ರಿ, ಜಿಲ್ಲಾ ಕುಳುವ ಮಹಾಸಭಾದ ಅಧ್ಯಕ್ಷ ಅನಿಲ್ಕುಮಾರ್ ಉಪಸ್ಥಿತರಿದ್ದರು.