ತುಮರಿಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್ ಬೌದ್ಧಿಕ್ ಕಾರ್ಯಕ್ರಮದ ನಿಮಿತ್ತ ಗಣವೇಷಧಾರಿಗಳಿಂದ ಪಥ ಸಂಚಲನ ನೆರವೇರಿತು. 
ನ್ಯೂಸ್

ಉತ್ತಮ ಮೌಲ್ಯ ಬೆಳೆಸಿಕೊಳ್ಳಿ

ಆರ್‌ಎಸ್‌ಎಸ್‌ನಿಂದ ಪಥಸಂಚಲನ

ತುಮರಿ: ವ್ಯಕ್ತಿಯಲ್ಲಿರುವ ಅಸುರೀ ಗುಣಗಳನ್ನು ದೂರಮಾಡಿ, ಸಜ್ಜನಿಕೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ವಿಜಯದಶಮಿ ಆಚರಣೆಯ ನಿಜವಾದ ಆಶಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ವರ್ಗದ ದಕ್ಷಿಣ ಭಾರತ ಸಾಮರಸ್ಯ ಸರ ಸಂಯೋಜಕ ಜಿ.ವಿ.ರಾಜೇಶ್ ಹೇಳಿದರು.

ಸಾಗರ ತಾಲೂಕಿನ ತುಮರಿಯಲ್ಲಿ ಆಯೋಜಿಸಿದ್ದ ಬೌದ್ಧಿಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಸಮಾಜಕ್ಕೆ ಒಂದು ಸಂದೇಶ ನೀಡುವ ಜತೆಗೆ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದರು.

ಧರ್ಮ, ನ್ಯಾಯ ಮತ್ತು ಸತ್ಯದ ವಿಜಯವನ್ನು ಸಾರುವ ವಿಜಯದಶಮಿ, ನಮ್ಮೊಳಗಿನ ಅಹಂಕಾರ, ಅನ್ಯಾಯ, ಕಪಟ ಹಾಗೂ ದುರ್ಗುಣಗಳನ್ನು ಗೆಲ್ಲುವ ಸಂಕಲ್ಪಕ್ಕೆ ಪ್ರೇರಣೆಯಾಗಬೇಕು. ಕೃತ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಧರ್ಮ ಹಾಗೂ ಅಧರ್ಮದ ಸಂಘರ್ಷವನ್ನು ಪೌರಾಣಿಕ ಕಥನಗಳು ಬಿಂಬಿಸುತ್ತವೆ. ಕಲಿಯುಗದಲ್ಲಿ ದೇವತೆ ಮತ್ತು ರಾಕ್ಷಸರನ್ನು ಹೊರಗೆ ಹುಡುಕುವ ಬದಲು ಪ್ರತಿಯೊಬ್ಬರೊಳಗೂ ಇರುವ ಸಾತ್ವಿಕ ಹಾಗೂ ಆಸುರೀ ಪ್ರವೃತ್ತಿಗಳನ್ನು ಗುರುತಿಸಬೇಕು. ಉತ್ತಮ ಗುಣಗಳಿಗೆ ಪೋಷಣೆ ನೀಡಿ, ಕೆಟ್ಟ ಪ್ರವೃತ್ತಿಗಳನ್ನು ನಿಯಂತ್ರಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರ್‌ಎಸ್ ಶಾಖೆಗಳ ಮೂಲಕ ವ್ಯಕ್ತಿಗಳಲ್ಲಿ ಶಿಸ್ತು, ಸಂಘಟನಾ ಮನೋಭಾವ ಮತ್ತು ಸಾಮಾಜಿಕ ಬದ್ಧತೆ ಬೆಳೆಸುವ ಕಾರ್ಯವನ್ನು ನೂರು ವರ್ಷಗಳಿಂದ ಮಾಡುತ್ತಿದೆ. ಸಮಾಜದ ಶಕ್ತಿ ಅದರ ಸಂಘಟನೆಯಲ್ಲಿ ಅಡಗಿದೆ. ರಾಷ್ಟ್ರದ ಉನ್ನತಿಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಬೌದ್ಧಿಕ್ ಅಂಗವಾಗಿ ತುಮರಿಯ ಹಲವು ಬೀದಿಗಳಲ್ಲಿ ಪಥ ಸಂಚಲನ ನೆಡೆಯಿತು. ಜಿಲ್ಲಾ ಸಂಚಾಲಕ ಕೇಶವ ಸಂಪೇಕೈ, ತಿಮ್ಮಪ್ಪ ಚುಟ್ಟಿಕೆರೆ ಉಪಸ್ಥಿತರಿದ್ದರು.