ಶಿರಾಳಕೊಪ್ಪದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮವನ್ನು ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮಮತಾ ನಿಂಗಪ್ಪ, ರಾಘವೇಂದ್ರ, ಎಚ್.ಎಂ.ಚಂದ್ರಶೇಖರ್, ವೀರೇಶ್, ನಾಗರಾಜ ಗೌಡ ಇತರರಿದ್ದರು.  
ನ್ಯೂಸ್

ಮಕ್ಕಳಲ್ಲಿ ಕಲೆ, ಸಾಹಿತ್ಯ ಅಭಿರುಚಿ ಬೆಳೆಸಿ

ಶಿರಾಳಕೊಪ್ಪ: ಮಕ್ಕಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕು ಎಂದು ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜರುಗುವ ಮನೋರಂಜನೆ ಸಂಸ್ಕಾರ ನೀಡುವಂತಿರಬೇಕು. ಇದುವರೆಗೂ ರಾಜ್ಯಾದ್ಯಂತ 13 ಸಾವಿರ ಕಾರ್ಯಕ್ರಮ ನೀಡಿದ್ದೇವೆ. ಜಾನಪದ ಸಾಹಿತ್ಯ ನಿಮ್ಮಂತಹ ಅಭಿಮಾನಿಗಳಿಂದ ಜೀವಂತವಾಗಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಐ.ಎಂ.ಶಿವಾನಂದ ಸ್ವಾಮಿ ಮಾತನಾಡಿ, 1989-90 ರಲ್ಲಿ ಶಿರಾಳಕೊಪ್ಪದಲ್ಲಿ ಸಾಮೂಹಿಕ ದಸರಾ ಆಚಣೆಗೆ ಚಾಲನೆ ನೀಡಲಾಯಿತು. ದಸರಾ ಮೆರವಣಿಗೆಯಲ್ಲಿ ಪ್ರತಿ ವರ್ಷ ಹಲವಾರು ಕಲಾ ತಂಡಗಳನ್ನು ಪರಿಚಯಿಸಿದ್ದೇವೆ. ನಂತರ ಪುರಸಭೆಯಿಂದ ದೊರೆತ ವಿಶೇಷ ಅನುದಾನದಿಂದ ದಸರಾ ಸಂಭ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಇದರಲ್ಲಿ ಮುಖ್ಯಾಧಿಕಾರಿಗಳ ಶ್ರಮ ಮರೆಯುವಂತಿಲ್ಲ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ್ ಮಾತನಾಡಿ, ಎಲ್ಲ ಸಮಾಜಗಳು ಒಂದೆಡೆ ಸೇರಲು ದಸರಾ ಹಬ್ಬ ಮಾದರಿ. ಹಬ್ಬದ ಸಮಿತಿ ಸದಸ್ಯರು ನಡೆಸಿಕೊಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಬಿ.ವಿ.ಶೇಷಗಿರಿ ಅವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ್ ಗೌಡ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಎಚ್.ಎಂ.ಚಂದ್ರಶೇಖರ್, ರಾಜೇಶ್ವರಿ ವಸಂತಕುಮಾರ್, ವಿಜಯಲಕ್ಷ್ಮೀ, ಲಲಿತಮ್ಮ, ಲೋಕೇಶ್, ವೀರೇಶ್, ನಾಗರಾಜ ಗೌಡ, ಮಹಾಬಲೇಶ್, ಮುದಾಸೀರ್ ಅಹ್ಮದ್, ಮಂಜುನಾಥ್, ಎಂ.ಆರ್.ರಾಘವೇಂದ್ರ, ಡಾನ್ಸ್ ಗ್ರೂಪ್ ಪವನ್, ವಿಷ್ಣು ರಾಯ್ಕರ್, ಶಿವಾನಂದ ಸ್ವಾಮಿ ಮತ್ತು ದಸರಾ ಉತ್ಸವ ಸಮಿತಿಯಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.