ನ್ಯೂಸ್

ನಮ್ಮ ವಿರುದ್ಧ ಆರೋಪ ಮಾಡಿದವರು ಈಗ ಕಮಿಷನ್​ಗಾಗಿ ಕಿರುಕುಳ ಕೊಡುತ್ತಿದ್ದಾರೆ: ಸಿ.ಟಿ. ರವಿ

ಬೆಂಗಳೂರು: ನಮ್ಮ ವಿರುದ್ಧ ಆರೋಪ ಮಾಡಿ ಅಧಿಕಾರಕ್ಕೆ ಬಂದವರು ಈಗ ಕಮಿಷನ್​ಗಾಗಿ ಗುತ್ತಿಗೆದಾರರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.

ಕಳೆದ ಐದು ವರ್ಸಷಗಳಲ್ಲಿ ನಡೆದಿರುವ ಕಾಮಗಾರಿಗಳ ಬಿಲ್​ಗಳಿಗೂ ಕಮಿಷನ್​ ಕೊಡುವಂತೆ ಕೇಳುತ್ತಿದ್ದಾರೆ. ಸರ್ಕಾರಕ್ಕೆ ಪ್ರಾಮಾಣಿಕತೆ ಎನ್ನುವುದಿದ್ದರೆ ಗುತ್ತಿಗೆದಾರರ ಬಾಕಿಯನ್ನೂ ಪಾವತಿಸಲಿ. ಈವರೆಗೆ ಎಷ್ಟು ಬಿಲ್​ ಪಾವತಿಸಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್​ನವರು ನಮ್ಮ ಮೇಲೆ ಆರೋಪ ಮಾಡಿದ್ದರು. ಈಗ ಕಮಿಷನ್​ಗಾಗಿ ಇವರೇ ಗುತ್ತಿಗೆದಾರರಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ತಮ್ಮಗಾದ ಕುರಿತು ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನೋವನ್ನೂ ತೋಡಿಕೊಂಡಿದ್ದಾರೆ. ಗುತ್ತಿಗೆದಾರರು ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್​ ವಿರುದ್ಧ ಆರೋಪಿಸಿದ್ದಾರೆ.

ಯಾರಿಂದಲೂ ಸಾಧ್ಯವಿಲ್ಲ

ಡಿಸಿಎಂ ಡಿ.ಕೆ. ಶಿವಕುಮಾರ್​ ನೋಡಿದರೆ ತಮಗೆ ಬೆದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್​ ಅವರಿಗೆ ಬ್ಲ್ಯಾಕ್​ಮೇಲ್​ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇವರೇ ಯಾರಿಗಾದರೂ ಬ್ಲ್ಯಾಕ್​ಮೇಲ್​ ಮಾಡಿರಬಹುದು. ಗುತ್ತಿಗೆದಾರರ ಬಳಿ ಕಮಿಷನ್​ಗೆ ಬೇಡಿಕೆ ಇಟ್ಟಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ.

ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ನ್ಯಾಯಾಂಗ ಸಮಿತಿಯೊಂದನ್ನೂ ರಚಿಸಲಾಗಿತ್ತು. ಕಾಮಗಾರಿ ನೀಡುವ ಮೊದಲು ಎಲ್ಲವೂ ಸರಿ ಇದೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿತ್ತು. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಮದ ಮೇಲೆ ಯಾವ ರೀತಿಯ ಕ್ರಮಕೈಗೊಂಡಿದ್ದಾರೆ. ತಮ್ಮದೇ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಈ ವಿಚಾರವಾಗಿ ತನಿಖೆಯಾಗಬೇಕಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.