ನ್ಯೂಸ್

ಸಿಟಿ ರವಿ ಬಂಧನಕ್ಕೆ ವಿಜಯೇಂದ್ರ ಆಕ್ರೋಶ

Bengaluru - Political - Shivananda Tagadur

ಬೆಂಗಳೂರು:

ಹಿರಿಯ ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸುವ ಮೂಲಕ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೂಂಡಾ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟ್ವೀಟ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್, ರಾಜ್ಯದಲ್ಲಿ ಇದೀಗ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ, ಪ್ರಜಾಪ್ರಭುತ್ವ ದೇಗುಲವೆನಿಸಿರುವ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿದೆ ಎಂದು ದೂರಿದ್ದಾರೆ.

ಹಲ್ಲೆ ಯತ್ನಕ್ಕೊಳಗಾದ ಶಾಸಕ ಸಿ.ಟಿ.ರವಿ, ಅವರಿಗೆ ರಕ್ಷಣೆ ನೀಡದೆ, ಸದನದ ಒಳಗಿನ ಘಟನೆಯನ್ನು ಉಲ್ಲೇಖಿಸಿ ದೂರು ಪಡೆದುಕೊಂಡು ಅವರನ್ನು ಬಂಧಿಸಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಣಿಕೆ ಬಿಗಿಯುವ ಸರ್ವಾಧಿಕಾರಿ ಧೋರಣೆಯಾಗಿದೆ, ವಿಧಾನಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣು ಪಾಲಾಗಿಸುವ ದಾರ್ಷ್ಟ್ಯತನ ಮೆರೆಯಲು ಕಾಂಗ್ರೆಸ್ ಹೊರಟಿದೆ ಎಂದು ಹೇಳಿದ್ದಾರೆ.

ಮತ್ತೊಂದು ತುರ್ತು ಪರಿಸ್ಥಿತಿ ಹೇರಿಕೆಯ ಪರೋಕ್ಷ ಹವಣಿಕೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಿ. ಸಿ.ಟಿ. ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿ ಅವರ ಮೇಲೆ ದೌರ್ಜನ್ಯ ನಡೆಸಿದ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವ ವರೆಗೂ ಬಿಜೆಪಿ ಹೋರಾಟ ನಿಲ್ಲದು ಎಂದಿದ್ದಾರೆ.

ಶಾಸಕ ಸಿ ಟಿ ರವಿ ಅವರ ಮೇಲೆ ಸುವರ್ಣ ಸೌಧದಲ್ಲಿ ಮಾರ್ಷಲ್ ಗಳ ಸುಮ್ಮುಖದಲ್ಲೇ ಹೊರಗಿನ ಗೂಂಡಾಗಳಿಂದ ನಡೆದಿರುವ ದೌರ್ಜನ್ಯ ಹಾಗೂ ಮಾರಣಾಂತಿಕ ಹಲ್ಲೆಯತ್ನದ ಕುರಿತು ಉಭಯ ಸದನಗಳ ಸ್ಪೀಕರ್‌ಗಳು ತಮ್ಮ ನಿಲುವು ಪ್ರಕಟಿಸಿ ಕ್ರಮ ಕೈಗೊಳ್ಳಬೇಕು, ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.