ನ್ಯೂಸ್

ಹಿಂದು ಸಮಾಜದ ಅಸ್ಪೃಶ್ಯತೆ ನಿವಾರಣೆ ಆಗಲಿ

ಸುನಿಲ್ ಪೊನ್ನೇಟಿ

ಕುಶಾಲನಗರ:

ಅಸ್ಪೃಶ್ಯತೆ ರಹಿತ ಹಿಂದು ಸಮಾಜ ನಿರ್ಮಾಣದ ಸಂಕಲ್ಪ ಮಾಡುವ ಮೂಲಕ ಹನುಮ ಜಯಂತಿ ಆಚರಣೆಗೆ ಸಾರ್ಥಕ್ಯತೆ ತಂದುಕೊಡಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ಹನುಮ ಜಯಂತಿ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದಲ್ಲಿ ಚಾಮುಂಡೇಶ್ವರಿ ಉತ್ಸವ ಸಮಿತಿ ವತಿಯಿಂದ ಗುರುವಾರ ರಾತ್ರಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದುಗಳು ಆರಾಧಿಸುವ ದೇವಾನುದೇವತೆಗಳು ಭಕ್ತರನ್ನು ಜಾತಿ ಆಧಾರದಲ್ಲಿ ನೋಡಲಿಲ್ಲ. ಎಲ್ಲಾ ಜಾತಿಯ ಭಕ್ತರನ್ನೂ ದೇವತೆಗಳು ಅನುಗ್ರಹಿಸುತ್ತಾ ಬಂದಿದ್ದಾರೆ. ಆದರೆ ಹಿಂದುಗಳು ಜಾತಿ ಹೆಸರಿನಲ್ಲಿ ಒಗ್ಗಟ್ಟು ಕಳೆದುಕೊಂಡಿದ್ದಾರೆ. ಇದರ ಲಾಭವನ್ನು ಬೇರೆ ಧರ್ಮದವರು ಪಡೆದುಕೊಂಡು ತಮ್ಮ ಧರ್ಮದ ಬೆಳವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹಿಂದುಗಳು ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆAದೂ ಎಚ್ಚೆತ್ತುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥ ಪರಿಸ್ಥಿತಿ ಎದುರಿಸುವ ಅವಕಾಶವೂ ಸಿಗಲಿಕ್ಕಿಲ್ಲ. ಹಾಗಾಗಿ ಹನುಮ ಜಯಂತಿ ಆಚರಣೆ ನೆಪದಲ್ಲಾದರೂ ಹಿಂದುಗಳು ಜಾತಿ ಬಿಟ್ಟು ಹಿಂದು ನಾವೆಲ್ಲಾ ಒಂದು ಎನ್ನುವ ಒಗ್ಗಟ್ಟು ಮೆರೆಯಬೇಕು ಎಂದರು.

ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಅಪಹರಣವಾಗಿದ್ದ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರುವಲ್ಲಿ ಹನುಮನ ಪಾತ್ರ ಮಹತ್ವವಾಗಿದ್ದು, ಯಾವುದೇ ಸಮಸ್ಯೆ ಬಂದರೂ ಹನುಮಾನ್ ಚಾಲೀಸ ಪಠಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ಇಂಥ ಶಕ್ತಿಶಾಲಿ ಹನುಮ ಹಿಂದು ಸಮುದಾಯವನ್ನು ಬೆಳಗುವಂಥಾಗಲಿ ಎಂದು ಆಶಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಉದ್ಯಮಿಗಳಾದ ಮಂಜೇಶ್, ರಘು, ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಸಂಘಟಕರಾದ ಸಚಿನ್ ಮತ್ತಿತರರು ಇದ್ದರು. ಇದೇ ಸಂದರ್ಭ ಕಿರುತೆರೆಯ ಪ್ರಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.