ನ್ಯೂಸ್

ಶಿಕ್ಷಣ ಕ್ಷೇತ್ರಕ್ಕೆ ‘ಆಕಾಂಕ್ಷಾ’; ಪರಿವರ್ತನೆಗಾಗಿ ಸಿಎಸ್‌ಆರ್ ಸಮಾವೇಶ

ಬೆಂಗಳೂರು: ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)ಯಡಿ ಕಾರ್ಪೋರೇಟ್ ಸಂಸ್ಥೆಗಳು ಕೊಡಮಾಡುವ ದೇಣಿಗೆಯನ್ನು ಆನ್‌ಲೈನ್‌ನಲ್ಲಿ ಸಂಗ್ರಹಕ್ಕೆ ಸೃಷ್ಟಿಯಾಗಿರುವ ‘ಆಕಾಂಕ್ಷಾ’ ವೇದಿಕೆಗೆ ಚೈತನ್ಯ ತುಂಬಲು ಸರ್ಕಾರ ಮುಂದಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಆರ್ಥಿಕ ಬಲ ನೀಡಲು ಈ ವೇದಿಕೆಯನ್ನು ಬಳಸಿಕೊಳ್ಳಲಿದೆ. ಇದಕ್ಕಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಸ್‌ಆರ್ ಸಮಾವೇಶವನ್ನು ಶುಕ್ರವಾರ ಆಯೋಜಿಸಿದೆ. ಶಿಕ್ಷಣ, ಸಾಮಾಜಿಕ ಪರಿವರ್ತನೆಯ ಹೆಜ್ಜೆ ಎಂಬ ಅಭಿದಾನವನ್ನೂ ನೀಡಲಾಗಿದೆ.

ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸಮಾವೇಶದ ಮುಖ್ಯ ಉದ್ದೇಶ. ಆದರೂ ಸಿಎಸ್‌ಆರ್ ನಿಧಿಗೆ ನೀಡುವ ಶೇ.2ರಷ್ಟು ನೆರವಿನ ಮಹತ್ವ, ಬಳಕೆ ರೀತಿಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಟ್ಟು, ಸಹಭಾಗಿತ್ವದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಸರ್ಕಾರ ಬಯಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಮಧು ಬಂಗಾರಪ್ಪ, ಡಾ.ಶರಣಪ್ರಕಾಶ ಪಾಟೀಲ್, ಡಾ.ಎಂ.ಸಿ.ಸುಧಾಕರ್, ಡಿ.ಸುಧಾಕರ್ ಭಾಗವಹಿಸಲಿದ್ದಾರೆ.

‘ಪಾಲುದಾರರ ಸಹಯೋಗ ಮತ್ತು ಸಾಮಾಜಿಕ ಪರಿಣಾಮ’ ವಿಷಯದ ಮೇಲೆ ಸಿಎಸ್‌ಆರ್ ಸಮಾವೇಶ ನಡೆಯಲಿದೆ. ಶಿಕ್ಷಣ ಕೇವಲ ಜ್ಞಾನ ಪ್ರಸಾರ ಪ್ರಕ್ರಿಯೆ ಮಾತ್ರವಲ್ಲ; ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪ್ರಬಲ ಸಾಧನವಾಗಿದೆ. ಬಡತನದಿಂದ ಮುಕ್ತವಾಗಲು ಶಿಕ್ಷಣ ಮತ್ತು ಕೌಶಲ್ಯ ಸಹಾಯ ಮಾಡುತ್ತದೆ ಎನ್ನುವುದು ಸರ್ಕಾರದ ಆಶಯವಾಗಿದೆ.

ಸಿಎಸ್‌ಆರ್ ನೀತಿ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ವ್ಯಾಪ್ತಿಯಡಿ ಕಾರ್ಪೋರೇಟ್‌ಗಳಿಗೆ ಕೈಜೋಡಿಸಲು ಮತ್ತು ಸಾಮಾಜಿಕ ಪ್ರಗತಿಗೆ ಸಾಮೂಹಿಕವಾಗಿ ಕೆಲಸ ಮಾಡಬೇಕು ಎನ್ನುವುದು ಸಮಾವೇಶದ ಮನವಿಯಾಗಿದೆ.

ಯುಎನ್‌ಡಿಪಿ, ಯುನಿಸ್ೆ ಮತ್ತು ೆಡರೇಷನ್ ಆ್ ಇಂಡಿಯನ್ ಚೇಂಬರ್ಸ್ ಆ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಜಂಟಿಯಾಗಿ ಈ ಸಮಾವೇಶ ಆಯೋಜಿಸಿವೆ. 60ಕ್ಕಿಂತ ಹೆಚ್ಚು ಪ್ರತಿಷ್ಠಿತ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಭಾಗವಹಿಸಲಿದ್ದಾರೆ.

ಸಿಎಸ್‌ಆರ್ ಅಂಕಿ-ಅಂಶ

ಕಳೆದ ಐದು ವರ್ಷಗಳಲ್ಲಿ ಕಾರ್ಪೋರೇಟ್‌ಗಳು ಸಿಎಸ್‌ಆರ್ ಅಡಿಯಲ್ಲಿ 7,466 ಕೋಟಿ ರೂ. ವ್ಯಯಿಸಿದ್ದು, ಈ ಪೈಕಿ ಶಿಕ್ಷಣಕ್ಕಾಗಿ 3,667 ಕೋಟಿ ರೂ. ವೆಚ್ಚ ಮಾಡಿವೆ ಎಂದು 2021-22ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ವರದಿ ಹೇಳುತ್ತದೆ.

ರಾಜ್ಯದಲ್ಲಿ 2,588 ಕಂಪನಿಗಳು ಸಿಎಸ್‌ಆರ್ ವ್ಯಾಪ್ತಿಗೆ ಒಳಪಟ್ಟಿವೆ. ಸಿಎಸ್‌ಆರ್ ಅಡಿ 5,024 ಕೋಟಿ ರೂ. ಸಂಗ್ರಹಿಸಿದ್ದು, 4,143 ಕೋಟಿ ರೂ. ವ್ಯಯಿಸಲಾಗಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು 2019ರ ಜೂನ್ ವರದಿಯಲ್ಲಿ ಉಲ್ಲೇಖಿಸಿದೆ.

ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ 2019ರ ಜೂನ್ ವರದಿ ಪ್ರಕಾರ ಮಾಹಿತಿ ತಂತ್ರಜ್ಞಾನ, ಸಂಪರ್ಕ, ಸಂವಹನ ವಲಯದ 410 ಕಂಪೆನಿಗಳು ಸಿಎಸ್‌ಆರ್ ಪಾಲುದಾರರು. ಒಟ್ಟು ಸಂಗ್ರಹಿಸಲಾದ 2,533 ಕೋಟಿ ರೂ.ಗಳಲ್ಲಿ 2,263 ಕೋಟಿ ರೂ. ಖರ್ಚಾಗಿದೆ.

ರಾಷ್ಟ್ರೀಯ ಸಿಎಸ್‌ಆರ್ 2019-20ರ ವರದಿ ಪ್ರಕಾರ ಬಹುಪಾಲು ನಿಧಿಯು ಬೆಂಗಳೂರು, ಮೈಸೂರು, ದಕ್ಷಿಣಕನ್ನಡ ಮತ್ತು ಧಾರವಾಡ ಜಿಲ್ಲೆಗಳನ್ನು ಕೇಂದ್ರೀಕರಿಸಿದೆ. ವ್ಯಯಿಸಿದ 522 ಕೋಟಿ ರೂ.ಗಳಲ್ಲಿ ನಿರ್ದಿಷ್ಟವಾಗಿ ಜಿಲ್ಲೆಗಳು ನಮೂದಾಗಿಲ್ಲ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಿಗೆ ಶೂನ್ಯ ವಿನಿಯೋಗ, ಆಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಕನಿಷ್ಟ ಮೊತ್ತ ಬಳಕೆಯಾಗಿದೆ.